ಕಿಚ್ಚ ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ಬೈದು, ಬೆದರಿಕೆ ಹಾಕಿರುವ ಪತ್ರವೊಂದು ಸುದೀಪ್ ಅವರ ನಿವಾಸಕ್ಕೇ ಬಂದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಕಿಚ್ಚ ಸುದೀಪ್ ಕುಟುಂಬ ಸದಸ್ಯರು. ಸುದೀಪ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹೊರಬೀಳುವುದಕ್ಕೂ ಪತ್ರ ಬಂದಿರುವುದಕ್ಕೂ ತಾಳೆಯಾಗಿದೆ. ಕಾಕತಾಳೀಯವೇ ಇರಬಹುದು, ಆದರೆ ಹಾಗೆ ಕಾಣುತ್ತಿಲ್ಲ.
ಕಿಚ್ಚನ ಈ ಹೇಳಿಕೆ ಈಗ ಸ್ಯಾಂಡಲ್ ವುಡ್ನಲ್ಲಿ ಸಂಚಲನ ಮೂಡಿಸಿದೆ. ಸುದೀಪ್ ಅವರನ್ನು ಎದುರು ಹಾಕಿಕೊಂಡ ಸ್ಟಾರ್ ಯಾರು? ಕಿಚ್ಚನಿಗೆ ಬೆದರಿಕೆ ಹಾಕಿ ಪತ್ರ ಬರೆದಿದ್ದು ಯಾರು ಎಂದು ತಲೆಕೆಡಿಸಿಕೊಂಡಿದ್ದಾರೆ.
ನಮ್ಮ ಮನೆ ಅಡ್ರೆಸ್ ಗೊತ್ತಿದೆ. ಪತ್ರ ಬರೆದು ಹಾಕಿದ್ದಾರೆ. ಇದು ರಾಜಕೀಯದಲ್ಲಿ ಇರುವವರ ಕೈವಾಡ ಅಲ್ಲವೇ ಅಲ್ಲ. ಸಿನಿಮಾರಂಗದಲ್ಲಿ ಇರುವವರೇ ಈ ರೀತಿಯ ಕೃತ್ಯ ಮಾಡಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ಅದು ಯಾರು ಅಂತ ಗೊತ್ತು. ಇವತ್ತು ಮಾತನಾಡಲ್ಲ. ಇದಕ್ಕೆ ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡುತ್ತೇನೆ ಎಂದು ಹೇಳಿದ್ದಾರೆ ಸುದೀಪ್.
ಎಲ್ಲಾ ಚಿತ್ರರಂಗದಲ್ಲೂ ಕೆಲವರು ಆಗದೆ ಇರೋರು ಇರುತ್ತಾರೆ. ನನ್ನ ಮಾತು ಏನಿದ್ದರೂ ಪ್ರೀತಿ ತೋರಿಸೋರಿಗೆ. ಪತ್ರ ಕಳುಹಿಸಿರೋರಿಗೂ ಒಂದು ಉತ್ತರ ಕೊಟ್ಟೇ ಕೊಡ್ತೀನಿ. ಯಾಕಂದ್ರೆ, ಅದು ಬೇರೆಯವರಿಗೂ ಪಾಠ ಆಗಬೇಕು ಎನ್ನುವುದು ಸುದೀಪ್ ಮಾತು. ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಸುದೀಪ್ ಅವರ ಆಪ್ತ, ನಿರ್ಮಾಪಕ ಜಾಕ್ ಮಂಜು ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ಇದೂವರೆಗೆ ಪತ್ರ ಬರೆದಿರುವುದು ಯಾರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ಮೇಲ್, ಸೋಷಿಯಲ್ ಮೀಡಿಯಾ ಮೂಲಕ ಬೆದರಿಕೆ ಹಾಕಿದರೆ, ಡಿಜಿಟಲ್ ಟ್ರ್ಯಾಕ್ ಮಾಡುತ್ತಾರೆ ಎಂಬ ಕಾರಣಕ್ಕೇ ಖದೀಮ ಈ ರೀತಿಯ ಬೆದರಿಕೆ ಹಾಕಿದ್ದಾನೆ. ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.