ಶಿಲ್ಪಾ ಶೆಟ್ಟಿ. 2007ರಲ್ಲಿ ರಾಜಸ್ಥಾನದ ಜೋಧ್`ಪುರದಲ್ಲೊಂದು ಏಡ್ಸ್ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆ ಪ್ರೋಗ್ರಾಮಿಗೆ ಶಿಲ್ಪಾ ಶೆಟ್ಟಿ ಮುಖ್ಯ ಅತಿಥಿ. ಶಿಲ್ಪಾಶೆಟ್ಟಿ ಜೊತೆ ಹಾಲಿವುಡ್ ನಟ ರಿಚರ್ಡ್ ಗೇರ್ ಕೂಡಾ ಅತಿಥಿಯಾಗಿದ್ದರು. ವೇದಿಕೆಯಲ್ಲಿದ್ದ ರಿಚರ್ಡ್ ಗೇರ್, ಶಿಲ್ಪಾಶೆಟ್ಟಿಯನ್ನು ವೇದಿಕೆಯ ಮೇಲೆಯೇ ಅಪ್ಪಿ ಮುದ್ದಾಡಿಬಿಟ್ಟರು. ಶಿಲ್ಪಾಶೆಟ್ಟಿಗೆ ಬ್ಯಾಡ್ ಟೈಂ ಶುರುವಾಗಿತ್ತು.
ಶಿಲ್ಪಾಶೆಟ್ಟಿ ವಿರುದ್ಧ ರಾಜಸ್ಥಾನದ ಜೋಧ್‍ಪುರ ಪೊಲೀಸರು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಕೇಸು ಹಾಕಿದರು. ರಾಜಸ್ಥಾನ ಸೇರಿದಂತೆ ದೇಶದ ವಿವಿಧೆಡೆ 100ಕ್ಕೂ ಹೆಚ್ಚು ಅಸಭ್ಯ ವರ್ತನೆ ಕೇಸುಗಳು ದಾಖಲಾದವು. ಈ ಕೇಸುಗಳ ವಿಚಾರಣೆ ಎದುರಿಸಲಾಗದೆ ಶಿಲ್ಪಾಶೆಟ್ಟಿ, ಸುಪ್ರೀಂಕೋರ್ಟ್ ಮೊರೆ ಹೋದರು. ಎಲ್ಲ ಕೇಸುಗಳನ್ನೂ ಮುಂಬೈಗೆ ವರ್ಗಾಯಿಸಿಕೊಡಿ ಎಂದು ಮನವಿ ಮಾಡಿಕೊಂಡರು. ಅದು ಈಡೇರಿದ್ದು 10 ವರ್ಷಗಳ ನಂತರ. ಅದಾದ ಮೇಲೆ 2017ರಲ್ಲಿ ಮುಂಬೈ ಕೋರ್ಟ್ ಶಿಲ್ಪಾಶೆಟ್ಟಿಯವರನ್ನು ಆರೋಪದಿಂದ ಖುಲಾಸೆ ಮಾಡಿತ್ತು. ಅಷ್ಟಕ್ಕೇ ನಿಲ್ಲಲಿಲ್ಲ. ರಾಜಸ್ಥಾನ ಪೊಲೀಸರು ಮೇಲ್ಮನವಿ ಸಲ್ಲಿಸಿದರು. ಅದರ ವಿಚಾರಣೆ ನಡೆದು ಮುಂಬೈ ಸೆಷನ್ಸ್ ಕೋರ್ಟ್ ಈಗ ಕೆಳಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಒಂದು ಮುತ್ತಿನ ಕಥೆಗೆ 16 ವರ್ಷಗಳ ನಂತರ ಅಲ್ಪ ವಿರಾಮ. ಇದನ್ನೂ ಮೀರಿ ರಾಜಸ್ಥಾನ ಪೊಲೀಸರು ಮೇಲ್ಮನವಿ ಹೋದರೆ ಒಂದು ಮುತ್ತಿನ ಕಥೆ ಮುಂದುವರೆಯಲಿದೆ.