ಅಮೃತವರ್ಷಿಣಿಯ ಹೇಮಂತ್ ಪಾತ್ರವನ್ನು ಕನ್ನಡಿಗರು ಮರೆಯೋದಾದರೂ ಹೇಗೆ..? ಶರತ್ ಬಾಬು ಕನ್ನಡಿಗರಿಗೆ ಅಪರಿಚಿತರಲ್ಲ. ನಟಿಸಿರುವ ಚಿತ್ರಗಳು 50ಕ್ಕೂ ಹೆಚ್ಚು. ಜನುಮದಾತ, ನೀಲಾ, ರಣಚಂಡಿ, ಶಕ್ತಿ, ಬೃಂದಾವನ.. ಹೀಗೆ ಹಲವು ಚಿತ್ರಗಳಲ್ಲಿ ನಟಿಸಿರುವ ಶರತ್ ಬಾಬು ತಮಿಳು, ತೆಲುಗಿನಲ್ಲಿ ದೊಡ್ಡ ನಟ. ಅವರಿಗೀಗ 71 ವರ್ಷ ವಯಸ್ಸು. ಅವರ ಆರೋಗ್ಯ ಏರುಪೇರಾಗಿದೆ. ಹೀಗಾಗಿ ಶರತ್ ಬಾಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಯಾವ ಕಾಯಿಲೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹೊರಬಂದಿಲ್ಲ. ಶರತ್ ಬಾಬು ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ . . ಅಭಿಮಾನಿಗಳು ಕೂಡ ಶರತ್ ಬಾಬು ಆರೋಗ್ಯದಲ್ಲಿ ಶೀಘ್ರದಲ್ಲಿ ಚೇತರಿಕೆ ಕಾಣಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. 1973ರಲ್ಲಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಶರತ್ ಬಾಬು, ರಾಮರಾಜ್ಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಮುಳ್ಳ ಬಂಧಂ, ಸೀತಕೋಕ ಚಿಲುಕ, ಸಂಸಾರ ಒಂದು ಚದರಂಗಂ, ಅಣ್ಣಯ್ಯ, ಆಪದ್ಭಾಂದವುಡು ಮುಂತಾದ ಅದ್ಭುತ ಚಿತ್ರಗಳಲ್ಲಿ ಶರತ್ ಬಾಬು ನಟಿಸಿದ್ದಾರೆ. ನೆಗೆಟಿವ್ ರೋಲ್ಗಳಲ್ಲೂ ಅವರು ಮಿಂಚಿದ್ದರು.
ತೆಲುಗು ನಟಿ ಕಲ್ಯಾಣಿ ಪದಲಾ ಅವರ ಪೋಸ್ಟ್ ಮೂಲಕ ಈ ವಿಷಯ ಬಹಿರಂಗವಾಗಿದೆ. ಕಲ್ಯಾಣಿ ಪದಲ, ಕರಾಟೆ ಕಲ್ಯಾಣಿ ಎಂದೇ ಫೇಮಸ್ ಆಗಿರುವ ನಟಿ. ನನ್ನ ನೆಚ್ಚಿನ ಹೀರೋ ಬೇಗ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದಾರೆ ಕಲ್ಯಾಣಿ.