ರಾಜ್ ಬಿ.ಶೆಟ್ಟಿ ಕಡಿಮೆ ಬಜೆಟ್ಟಿನ, ವಿಭಿನ್ನ ಕಥೆಯ ಚಿತ್ರಗಳಿಗೆ ಫೇಮಸ್. ಅವರ ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಚಿತ್ರಗಳ ಮೂಲಕ ಅದನ್ನು ಸಾಬೀತೂ ಮಾಡಿದ್ದಾರೆ. ಆದರೆ ಈ ಬಾರಿ ಅವರ ಹೊಸ ಚಿತ್ರದ ಬಜೆಟ್ ಜಾಸ್ತಿಯಾಗಿದೆಯಂತೆ. ಇತ್ತೀಚೆಗೆ ತಾನೇ ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನೂ ಕೂಡಾ ಕಡಿಮೆ ಬಜೆಟ್ಟಿನಲ್ಲಿಯೇ ಪೂರೈಸಿದ್ದ ರಾಜ್ ಬಿ.ಶೆಟ್ಟಿ, ಇದೀಗ ತಾವೇ ಹೀರೋ ಆಗಿರುವ, ನಿರ್ಮಾಪಕರಾಗಿರುವ ಟೋಬಿ ಚಿತ್ರಕ್ಕೆ ಬಜೆಟ್ ಹೆಚ್ಚು ಮಾಡಿಕೊಂಡಿದ್ದಾರಂತೆ.
ಒಂದೆಡೆ ಮಲಯಾಳಂನಲ್ಲಿ ರುಧಿರ ಚಿತ್ರದಲ್ಲಿ ನಟಿಸುತ್ತಿರುವ ರಾಜ್ ಬಿ.ಶೆಟ್ಟಿ, ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಟೋಬಿ ಚಿತ್ರಕ್ಕೆ ಕಥೆಯನ್ನೂ ಬರೆದಿರುವ ರಾಜ್, ನಿರ್ದೇಶನದ ಜವಾಬ್ದಾರಿಯನ್ನು ತಮ್ಮದೇ ಟೀಮಿನಲ್ಲಿದ್ದ ಬಾಸಿಲ್ ಅವರಿಗೆ ವಹಿಸಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿಗೆ ಇಬ್ಬರು ನಾಯಕಿಯರಿದ್ದಾರೆ ಎನ್ನುವ ಮಾಹಿತಿ ಇದೆ. ಸಂಯುಕ್ತ ಹೊರನಾಡು ಹಾಗೂ ಚೈತ್ರ ಬಿ.ಆಚಾರ್ ರಾಜ್ ಎದುರು ನಾಯಕಿಯರಾಗಿ ನಟಿಸುತ್ತಿದ್ದಾರಂತೆ. ಸಂಯುಕ್ತ ಹೊರನಾಡು ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ವಿಭಿನ್ನ ಪಾತ್ರಗಳಿಗೆ ಸೂಟ್ ಆಗುವ, ಚಾಲೆಂಜಿಂಗ್ ಪಾತ್ರಗಳನ್ನೇ ಅರಸುವ ಹುಡುಗಿ. ಇತ್ತೀಚಿನ ಲವ್ ಬಡ್ರ್ಸ್ ಚಿತ್ರದಲ್ಲಿ ನಾಯಕ-ನಾಯಕಿಯರನ್ನೂ ಮೀರಿಸುವಂತೆ ನಟಿಸಿದ್ದವರು. ಇನ್ನು ಚೈತ್ರ ಬಿ.ಆಚಾರ್ ಇತ್ತೀಚೆಗೆ ಗಿಲ್ಕಿ ಚಿತ್ರದ ಮೂಲಕ ಗಮನ ಸೆಳೆದಿದ್ದವರು. ರಕ್ಷಿತ್ ಶೆಟ್ಟಿ ಜೊತೆ ಸಪ್ತಸಾಗರದಾಚೆಯೆಲ್ಲೋ.. ಚಿತ್ರದಲ್ಲೂ ನಟಿಸುತ್ತಿದ್ದಾರೆ. ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.