ರೇಸ್ ಕೋರ್ಸ್. ಬೆಂಗಳೂರಿನ ಈ ರಸ್ತೆಗೆ ಒಂದು ದೊಡ್ಡ ಚರಿತ್ರೆಯಿದೆ. ಹಲವು ಜನರ ಲ್ಯಾಂಡ್ ಮಾರ್ಕಿನಲ್ಲಿ ರೇಸ್ ಕೋರ್ಸ್ ಇದ್ದೇ ಇರುತ್ತೆ. ಫಿಲ್ಮ್ ಚೇಂಬರ್`ಗೆ ಈ ರೇಸ್ ಕೋರ್ಸ್ ಅರ್ಧ ಕಿಮೀಗಿಂತ ಹತ್ತಿರ. ಮೆಜೆಸ್ಟಿಕ್ ಒಂದು ಕಿಲೋಮೀಟರ್. ಗಾಂಧಿನಗರವೂ ಅರ್ಧ ಕಿಮೀ ದೂರ ಅಷ್ಟೆ.. ಅಷ್ಟೇ ಏಕೆ, ವಿಧಾನಸೌಧವೂ ಇಲ್ಲಿಂದ ಹತ್ತಿರ. ಈ ಎಲ್ಲ ಕಡೆಯೂ ಇದ್ದ ಅಂಬರೀಷ್ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ಇಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ.
ಇಲ್ಲಿ ಫಿಲ್ಮ್ ಚೇಂಬರ್ ಇದೆ. ಹತ್ತಿರದಲ್ಲೇ ಗಾಂಧಿ ನಗರ ಇದೆ. ಇದು ಅಂಬರೀಷ್ ಅವರ ಕಾರ್ಯಕ್ಷೇತ್ರವಾಗಿದ್ದ ಜಾಗ. ಹಾಗಾಗಿ ಅವರ ಹೆಸರು ಅತ್ಯಂತ ಸೂಕ್ತ. ಅವರ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಈ ಹೆಸರು ಇಟ್ಟಿದ್ದೇವೆ
ಇದು ಸಿಎಂ ಬೊಮ್ಮಾಯಿ ಮಾತು. ಮಾರ್ಚ್ 27ಕ್ಕೆ ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿದ್ದ ಬಸವರಾಜ ಬೊಮ್ಮಾಯಿ ನುಡಿದಂತೆಯೇ ರಸ್ತೆಯನ್ನು ಉದ್ಘಾಟಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ನಾಮಕರಣ ಮಾಡಿದ ಬಳಿಕ ಅಂಬಿ ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ನೆರವೇರಿದೆ. 12 ಕೋಟಿ ರೂ. ವೆಚ್ಚದಲ್ಲಿ ವಿಶೇಷ ವಿನ್ಯಾಸದಲ್ಲಿ ಅಂಬಿ ಸ್ಮಾರಸ ನಿರ್ಮಾಣವಾಗಿದೆ. ಸ್ಮಾರಕ ಬಳಿ 32 ಅಡಿಯ ಅಂಬಿ ಪ್ರತಿಮೆ ಕೂಡ ಉದ್ಘಾಟನೆ ಆಗಿದೆ. ಒಂದು ಎಕರೆ 37 ಗುಂಟೆ ಜಾಗದಲ್ಲಿ ಅಂಬಿ ಸ್ಮಾರಕ ನಿರ್ಮಾಣ ಆಗಿದೆ.
ಅಂಬರೀಷ್ ಅವರನ್ನು 10 ವರ್ಷಗಳಿಂದ ಪ್ರೀತಿಯಿಂದ ಸಾಕಿ ಬೆಳೆಸಿದ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು. ಇದು ಅಂಬರೀಷ್ 50 ವರ್ಷ ಪೂರೈಸಿದ ವರ್ಷವಾಗಿದೆ. ಅಭಿಮಾನಿಗಳು ಈ ದಿನ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದರು. ಕರ್ನಾಟಕ ಸರ್ಕಾರದ ಅನುದಾನದ ಅಡಿಯಲ್ಲಿ ಈ ಸುಂದರ ಸ್ಮಾರಕ ನಿರ್ಮಾಣ ಆಗಿದೆ. ನಾನು ಅಭಿಮಾನಿಗಳಿಗೆ ಹೇಳ್ತಾನೇ ಇದ್ದೆ. ಆ ದಿನ ಇಂದು ಬಂದಿದೆ ಎಂದು ಭಾವುಕರಾದ ಸುಮಲತಾ, ಮರೆಯದೆ ನೆನಪಿಸಿಕೊಂಡಿದ್ದು ಯಡಿಯೂರಪ್ಪ ಅವರನ್ನು. ಯಡಿಯೂರಪ್ಪ ಅವರಿಗೆ ನಾವು ಈ ಬೇಡಿಕೆ ಇಟ್ಟಾಗ ಕೊಂಚವೂ ನಿಧಾನಿಸದೆ ಕಾರ್ಯರೂಪಕ್ಕೆ ತಂದರು. ಅಂಬರೀಷ್ ಎಲ್ಲೇ ಇದ್ದರೂ ಖುಷಿಪಟ್ಟಿರ್ತಾರೆ. ಅವರು ನಿಜಕ್ಕೂ ದೇವರ ಮಗ ಎಂದರು ಸುಮಲತಾ.
ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್, ರಾಕ್ಲೈನ್ ವೆಂಕಟೇಶ್, ರಾಘವೇಂದ್ರ ರಾಜ್ಕುಮಾರ್, ಕಂದಾಯ ಸಚಿವರಾದ ಆರ್.ಅಶೋಕ್, ಡಾ.ಕೆ ಸುಧಾಕರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.