ಕೌಸಲ್ಯ ಸುಪ್ರಜಾ ರಾಮ..
ಇದು ಶಶಾಂಕ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ. ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಹೀರೋ. ಹೀರೋಯಿನ್ ಆಗಿ ಬೃಂದಾ ಆಚಾರ್ಯ ಸೆಲೆಕ್ಟ್ ಆಗಿದ್ದಾರೆ.
ಪ್ರೇಮಂ ಪೂಜ್ಯಂ ಸಿನಿಮಾದ ಮೂಲಕ ಕನ್ನಡದ ಸಿನಿಮಾ ರಸಿಕರಿಗೆ ಪರಿಚಯವಾಗಿದ್ದ ಬೃಂದಾ, ಆನಂತರ ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇದೀಗ ಡಾರ್ಲಿಂಗ್ ಕೃಷ್ಣ ಜೊತೆ ತೆರೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದೆ.
ಕನ್ನಡದಲ್ಲಿ ಹೊಸ ಬಗೆಯ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ಶಶಾಂಕ್ ಅವರದ್ದು. ಅವರ ಸಿನಿಮಾದಲ್ಲಿ ನಾಯಕನಷ್ಟೇ ನಾಯಕಿಗೂ ಪ್ರಾಧಾನ್ಯತೆ ನೀಡಲಾಗುತ್ತದೆ. ಅವರ ಬಹುತೇಕ ಸಿನಿಮಾಗಳಲ್ಲಿ ನಾಯಕಿಯೇ ಹೈಲೈಟ್ ಕೂಡ ಆಗಿದ್ದಾರೆ. ಹಾಗಾಗಿ ಬೃಂದಾ ಅವರಿಗೆ ವಿಶೇಷ ಪಾತ್ರ ಸಿಕ್ಕಿರಬಹುದು ಎಂದು ಅಂದಾಜಿಸಲಾಗಿದೆ. ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದು.
ಅಂದಹಾಗೆ ಶಶಾಂಕ್ ಚಿತ್ರಗಳಲ್ಲಿ ನಟಿಸಿದ ನಾಯಕಿಯರಿಗೆ ಒಂದು ರೀತಿಯಲ್ಲಿ ಅದೃಷ್ಟ ಖುಲಾಯಿಸುತ್ತದೆ ಎಂದರೆ ಅಚ್ಚರಿಯಿಲ್ಲ. ರಾಧಿಕಾ ಪಂಡಿತ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು ಶಶಾಂಕ್ ಚಿತ್ರಗಳು. ಅದಾದ ನಂತರ ಆಶಿಕಾ ರಂಗನಾಥ್, ಮಯೂರಿ, ರಚನಾ ಇಂದರ್ ಸೇರಿದಂತೆ ಶಶಾಂಕ್ ಚಿತ್ರಗಳ ಮೂಲಕ ಹಲವು ನಾಯಕಿಯರು ದೊಡ್ಡ ಹೆಸರು ಮಾಡಿದ್ದಾರೆ. ಈಗ ಬೃಂದಾ ಆಚಾರ್ಯ ಸರದಿ.