ಕಾಡುಬೆಟ್ಟದ ಶಿವನ ತಂದೆಯ ಕಥೆ ಬರೆಯೋ ರಿಷಬ್ ಶೆಟ್ಟಿ ಮತ್ತೆ ಹೊಸ ಪ್ಲಾನ್ ಮಾಡಿದರಾ ಎಂದು ತಲೆಗೆ ಹುಳ ಬಿಟ್ಟುಕೊಳ್ಳಬೇಡಿ. ಇದು ಶೋಭಕೃತ್ ಸಂವತ್ಸರ. ಈ ಸಂವತ್ಸರ ಶುರುವಾದ ದಿನವೇ ಕಾಂತಾರ 2 ಬರವಣಿಗೆಯೂ ಶುಭಾರಂಭಗೊಂಡಿದೆ. ಯುಗಾದಿ ಶುಭಾಶಯ ಕೋರಿರುವ ರಿಷಬ್ ಶೆಟ್ಟಿ ಕಾಡಿನ ಲೋಕಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವ ಮೊದಲ ಹಂತ ಬರವಣಿಗೆಯ ಲೋಕಕ್ಕೆ ಪ್ರವೇಶಿಸಿದ್ದಾರೆ. ಯುಗಾದಿಯ ದಿನವೇ.. ಶೋಭಕೃತ್ ಸಂವತ್ಸರ ಶುರುವಾದ ದಿನವೇ.. ರೈಟಿಂಗ್ ಶುರು ಮಾಡಿದ್ದಾರೆ.
ಹಬ್ಬದ ಸಂಭ್ರಮದಲ್ಲಿ ಟ್ವೀಟ್ ಮಾಡಿರುವ ಹೊಂಬಾಳೆ ಸಂಸ್ಥೆ "ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ, ಕಾಂತಾರ ಚಿತ್ರದ ಎರಡನೇ ಭಾಗದ ಬರವಣಿಗೆ ಪ್ರಾರಂಭವಾಗಿದೆ ಎಂದು ಘೋಷಿಸಲು ಸಂತಸವಾಗುತ್ತಿದೆ. ಪ್ರಕೃತಿಯೊಂದಿಗಿನ ನಮ್ಮ ಸಂಬಂಧವನ್ನು ಪ್ರದರ್ಶಿಸುವ ಮತ್ತೊಂದು ಆಕರ್ಷಕ ಕಥೆಯನ್ನು ನಿಮ್ಮ ಮುಂದೆ ತರಲು ಉತ್ಸುಕರಾಗಿದ್ದೇವೆ. ಹೆಚ್ಚಿನ ಅಪ್ಡೇಟ್ಗಾಗಿ ಕಾಯುತ್ತಿರಿ ಎಂದು ಬರೆದುಕೊಂಡಿದೆ.
ಕಾಂತಾರಕ್ಕಾಗಿ ಕೆಲಸ ಮಾಡಿದ ಬಹುತೇಕ ತಂಡ ಪ್ರೀಕ್ವೆಲ್ಗೂ ಕೆಲಸ ಮಾಡುತ್ತಿದೆ. ಅನಿರುದ್ಧ್ ಮಹೇಶ್, ಶನಿಲ್ ಗುರು, ಶ್ಯಾಮ್ ಪ್ರಸಾದ್ ಹಾಗೂ ಪ್ರಕಾಶ್ ತುಮ್ಮಿನಾಡು ಈ ಬಾರಿ ಕೂಡ ರಿಷಬ್ ಶೆಟ್ಟಿ ಬರವಣಿಗೆಗೆ ಸಾಥ್ ಕೊಟ್ಟಿದ್ದಾರೆ. ಕಾಂತಾರದಲ್ಲಿ ಕಾಡುಬೆಟ್ಟು ಶಿವನ ಕಥೆ ನೋಡಿದ್ದೇವೆ. ರಿಷಬ್ ಶೆಟ್ಟಿ ತಂದೆ- ಮಗನಾಗಿ ಡಬಲ್ ರೋಲ್ ಪ್ಲೇ ಮಾಡಿದ್ದರು. ಆದರೆ ತಂದೆ ಪಾತ್ರ ಚಿತ್ರದ ಆರಂಭದ ಕೆಲ ನಿಮಿಷಗಳು ಮಾತ್ರ ಕಾಣಿಸಿಕೊಂಡಿತ್ತು. ಆ ಪಾತ್ರವನ್ನು ಹಿಗ್ಗಿಸುವ ಕೆಲಸ ನಡೀತಿದೆ.
ಕಾಂತಾರ 2ನಲ್ಲಿ ಹೈಲೈಟ್ ಆಗುವುದು ತಂದೆಯ ಪಾತ್ರ. ಹೀಗಾಗಿ ಆ ಕಥೆಯನ್ನೇ ದೊಡ್ಡದಾಗಿ ಹೇಳುವ ಪ್ರಯತ್ನ ನಡೆಯುತ್ತಿದೆ. ಮೂಲಗಳ ಪ್ರಕಾರ ಕಾಂತಾರ 2ದಲ್ಲಿ ಬರುವುದು ಕೇವಲ ಪ್ರೀಕ್ವೆಲ್ ಅಲ್ಲ. ಪ್ರೀಕ್ವೆಲ್ ಮತ್ತು ಸೀಕ್ವೆಲ್ ಎರಡನ್ನೂ ಜೋಡಿಸಿರುವ ಕಥೆ ಎನ್ನಲಾಗಿದೆ.