` ರಜನಿಕಾಂತ್ ಮನೆಯಲ್ಲೇ ಇದ್ದು.. ಕದ್ದು.. ಮನೆಯನ್ನೇ ಖರೀದಿಸಿದರು..!   - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಜನಿಕಾಂತ್ ಮನೆಯಲ್ಲೇ ಇದ್ದು.. ಕದ್ದು.. ಮನೆಯನ್ನೇ ಖರೀದಿಸಿದರು..!  
Aishwarya Rajinikanth Image

ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರೇ ಕಳ್ಳರಾಗಿದ್ದರು. ರಜನಿಕಾಂತ್ ಮಗಳು ಐಶ್ವರ್ಯಾ ಅವರ ಒಡವೆಗಳನ್ನು ಕದ್ದಿದ್ದರು ಎಂಬ ವಿಷಯ ಗೊತ್ತಾಗಿದೆ. ಯುಗಾದಿಗೆ ಮುನ್ನ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಐಶ್ವರ್ಯಾ ಅವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಒಡವೆಗಳು ಈಚೆಗೆ ಕಳ್ಳತನವಾಗಿದ್ದವು. ಈ ಸಂಬಂಧ ತೆಯ್ನಂಪೇಟ್ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ರಜನಿಕಾಂತ್ ಅವರು ದೂರು ದಾಖಲು ಮಾಡಿದ್ದರು. ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಈಶ್ವರಿ, ಲಕ್ಷ್ಮೀ ಮತ್ತು ಡ್ರೈವರ್ ವೆಂಕಟೇಶನ್ ಮೇಲೆ ಐಶ್ವರ್ಯಾ ಅವರು ಅನುಮಾನ ವ್ಯಕ್ತಪಡಿಸಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಈಗ ಕಳ್ಳರನ್ನು ಬಂಧಿಸಿದ್ದಾರೆ. ಐಶ್ವರ್ಯಾ ಅವರ ಅನುಮಾನ ನಿಜವಾಗಿದ್ದು, ಮನೆಗೆಲಸದವರೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಬಂಧಿತ ಕಾರು ಚಾಲಕ ವೆಂಕಟೇಶನ್ ಮತ್ತು ಮನೆಗೆಲಸದ ಮಹಿಳೆ ಈಶ್ವರಿ 100 ಸವರನ್ ಚಿನ್ನದ ಒಡವೆ, 30 ಗ್ರಾಂ ವಜ್ರದ ಒಡವೆ, ನಾಲ್ಕು ಕೆಜಿ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದರು ಎಂಬುದು ಗೊತ್ತಾಗಿದೆ. ಮನೆಗೆಲಸದ ಮಹಿಳೆ ಈಶ್ವರಿ ಒಡವೆಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಮನೆಯನ್ನು ಖರೀದಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈಶ್ವರಿ 18 ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಮನೆಯ ಬಗ್ಗೆ ಸಂಪೂರ್ಣವಾಗಿ ಈಶ್ವರಿಗೆ ತಿಳಿದಿತ್ತು. ಐಶ್ವರ್ಯಾಗೆ ಸೇರಿದ ಲಾಕರ್ನಿಂದ ಅನೇಕ ಬಾರಿ ಈಶ್ವರಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಹೀಗೆ ಕದ್ದ ಹಣದಲ್ಲಿ ಒಂದು ಮನೆಯನ್ನೇ ಖರೀದಿ ಮಾಡಿದ್ದಾರೆ ಎಂದರೆ ಇವರು ಎಷ್ಟು ಬಾರಿ.. ಎಷ್ಟೆಷ್ಟು ಒಡವೆ ಕದ್ದಿರಬಹುದು ಎಂದು ಅಂದಾಜು ಮಾಡಬಹುದು. ಕಳುವಾದ ಒಂದಷ್ಟು ಸಾಮಗ್ರಿಗಳನ್ನು ಮತ್ತು ಮನೆ ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಈಶ್ವರಿಯಿಂದ ವಶಕ್ಕೆ ಪಡೆಯಲಾಗಿದೆ.

2019ರಲ್ಲಿ ನಡೆದ ತಂಗಿಯ ಮದುವೆಯಲ್ಲಿ ಒಡವೆಗಳನ್ನು ಧರಿಸಿದ್ದ ಐಶ್ವರ್ಯಾ, ಆನಂತರ ಅವುಗಳನ್ನು ಲಾಕರ್ನಲ್ಲಿ ಇಟ್ಟಿದ್ದರು. 2021ರ ಆಗಸ್ಟ್ನಲ್ಲಿ ಆ ಲಾಕರ್ ಅನ್ನು ಮಾಜಿ ಪತಿ ಧನುಷ್ ಅವರ ಫ್ಲ್ಯಾಟ್ನಿಂದ ಐಶ್ವರ್ಯಾ ತೆಗೆದುಕೊಂಡು ಬಂದಿದ್ದರು. ಐಶ್ವರ್ಯಾ ಅವರು ಕಳೆದ ಫೆಬ್ರವರಿ 10ರಂದು ಲಾಕರ್ ಓಪನ್ ಮಾಡಿದಾಗ ಕೆಲವು ಒಡವೆಗಳು ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದರು. ವಜ್ರದ ಒಡವೆಯ ಸೆಟ್, ಚಿನ್ನಾಭರಣಗಳು, ನವರತ್ನಂ ಸೆಟ್ಗಳು, ಬಳೆಗಳು ಸೇರಿದಂತೆ ಸುಮಾರು 3.60 ಲಕ್ಷ ರೂ.ಮೌಲ್ಯದ ಅಭರಣಗಳು ಕಳ್ಳತನ ಆಗಿರುವುದು ಐಶ್ವರ್ಯಾ ಗಮನಕ್ಕೆ ಬಂದಿತ್ತು. ಹಲವು ವರ್ಷಗಳ ಕಾಲ ಜೊತೆಗೆ ಇದ್ದ ಮನೆಗೆಲಸವರೇ ಈ ರೀತಿ ಮಾಡಿರುವುದು ಅಚ್ಚರಿ ಉಂಟು ಮಾಡಿದೆ.