` ಉರಿಗೌಡ ನಂಜೇಗೌಡ ಸಿನಿಮಾ ವಾರ್ : ಕುಮಾರಸ್ವಾಮಿ ಕಿಡಿಕಿಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಉರಿಗೌಡ ನಂಜೇಗೌಡ ಸಿನಿಮಾ ವಾರ್ : ಕುಮಾರಸ್ವಾಮಿ ಕಿಡಿಕಿಡಿ
HD Kumaraswamy, Muniratna Image

ಉರಿಗೌಡ ಮತ್ತು ನಂಜೇಗೌಡ ಟಿಪ್ಪು ಸುಲ್ತಾನ್`ನ್ನು ಕೊಂದ ವೀರರು ಎಂಬ ವಿವಾದ ತಾರಕಕ್ಕೇರುತ್ತಿದ್ದಂತೆಯೇ ನಿರ್ಮಾಪಕರೂ ಆಗಿರುವ ಮುನಿರತ್ನ ಸಿನಿಮಾ ಘೋಷಿಸಿಬಿಟ್ಟರು. ಸದ್ಯಕ್ಕೆ ಉರಿಗೌಡ ನಂಜೇಗೌಡ/ನಂಜೇಗೌಡ ಉರಿಗೌಡ ಎಂಬ ಟೈಟಲ್ ರಿಜಿಸ್ಟರ್ ಮಾಡಿಸಿರುವ ಮುನಿರತ್ನ, ಕಥೆಯ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕಥೆ, ನಿರ್ದೇಶನ, ತಂತ್ರಜ್ಞರ ಆಯ್ಕೆಯನ್ನೂ ಫೈನಲ್ ಮಾಡದೇ ಇರೋ ಮುನಿರತ್ನ ಸದ್ಯಕ್ಕೆ ತಮ್ಮ ಬ್ಯಾನರ್ ಹೆಸರಿನಲ್ಲಿ ಟೈಟಲ್ ಮಾತ್ರವೇ ರಿಜಿಸ್ಟರ್ ಮಾಡಿಸಿದ್ದಾರೆ. ಆದರೆ ನಿರೀಕ್ಷೆಯಂತೆಯೇ ವಾಗ್ಯುದ್ಧ ತಾರಕಕ್ಕೇರಿದೆ.

ಟಿಪ್ಪುವನ್ನು ಕೊಂದ ಪಾಪವನ್ನು ಒಕ್ಕಲಿಗರ ತಲೆಗೆ ಕಟ್ಟಬೇಡಿ ಎಂದಿರೋ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಲ್ಪಿತ ಕಥೆ, ಸುಳ್ಳುಗಳಿಂದಲೇ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ, ಕರ್ನಾಟಕವನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವ ಬಿಜೆಪಿ ವಕ್ರದೃಷ್ಟಿ ಸದ್ಯಕ್ಕೆ ಒಕ್ಕಲಿಗರ ಮೇಲೆ ಬಿದ್ದಿದೆ. ಸ್ವಾಭಿಮಾನಿ ಒಕ್ಕಲಿಗರನ್ನು ಹೇಗಾದರೂ ಹಳ್ಳ ಹಿಡಿಸಲೇಬೇಕೆಂಬ ಹಿಡೆನ್ ಅಜೆಂಡ ಬಿಜೆಪಿಗೆ ಇರುವುದಂತೂ ಸತ್ಯ ಎಂದು ಟ್ವೀಟ್ ಮಾಡಿದ್ದಾರೆ.

ಮುನಿರತ್ನ ವಿರುದ್ಧವೂ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸಚಿವರು ವೃತ್ತಿಯಲ್ಲಿ ಚಿತ್ರ ನಿರ್ಮಾಪಕರಾದ ಮುನಿರತ್ನ ಅವರು ತಮ್ಮ ವೃಷಭಾದ್ರಿ ಪ್ರೊಡಕ್ಷನ್ ಮೂಲಕ ಉರಿಗೌಡ-ನಂಜೇಗೌಡ’ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿ ಸಿನಿಮಾ ಮಾಡಲು ಹೊರಟಿದ್ದಾರೆ. ಈ ಮೂಲಕ ಒಕ್ಕಲಿಗರ ಗೌರವವನ್ನು ಬೆಳ್ಳಿತೆರೆಯ ಮೇಲೆಯೂ ಮೂರಾಬಟ್ಟೆ ಮಾಡಲು ಸಂಚು ರೂಪಿಸಿದ್ದಾರೆ ಎಂದಿದ್ದಾರೆ.

ಕೇವಲ ಟೈಟಲ್ ರಿಜಿಸ್ಟರ್ ವಿಚಾರವೇ ಭರ್ಜರಿ ಸುದ್ದಿಯಾಗುತ್ತಿರುವಾಗ.. ಸಿನಿಮಾ ಮಾಡದೇ ಇರುತ್ತಾರಾ ಮುನಿರತ್ನ? ಬಿಜೆಪಿಯಲ್ಲಿ ಸಚಿವರಾಗಿರುವ ಮುನಿರತ್ನ ಸೆನ್ಸೇಷನ್ ಸೃಷ್ಟಿಸೋದ್ರಲ್ಲಿ ಎತ್ತಿದ ಕೈ.