ಕಬ್ಜ. ಇದೀಗ ದೇಶದಲ್ಲೆಡೆ ಸೌಂಡ್ ಮಾಡುತ್ತಿದೆ. ಕನ್ನಡದ ಸ್ಟಾರ್‍ಗಳು ನಟಿಸಿರುವ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಇದರ ನಡುವೆಯೇ ಆರ್.ಚಂದ್ರುಗೆ ತೆಲುಗು ಚಿತ್ರರಂಗದಿಂದ ಗುಡ್ ನ್ಯೂಸ್ ಬಂದಿದೆ. ಕಬ್ಜ ಸಿನಿಮಾ ನೋಡಿ ಟಾಲಿವುಡ್ ಪವರ್ ಸ್ಟಾರ್ ಮೆಚ್ಚಿಕೊಂಡಿದ್ದಾರೆ. ಮಧ್ಯರಾತ್ರಿ ಆರ್. ಚಂದ್ರು ಪವನ್ ಕಲ್ಯಾಣ್ಗೆ ಸಿನಿಮಾ ತೋರಿಸಿದ್ದಾರೆ. ಮೊದಲಾರ್ಧ ಪಕ್ಕಾ ಇಂಡಿಯನ್ ಮತ್ತು ದ್ವಿತೀಯಾರ್ಧ ಹಾಲಿವುಡ್ ರೇಂಜ್ ಸಿನಿಮಾ ಎಂದು ಪವನ್ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರಂತೆ. ಸಿನಿಮಾ ನೋಡಿ ಚಂದ್ರುನ ಹಾಡಿ ಹೊಗಳಿದ್ದಲ್ಲದೇ ಮೇಕಿಂಗ್, ಕಥೆ, ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಬಗ್ಗೆ ಕೊಂಡಾಡಿದ್ದಾರೆ.
ಇದಾದ ನಂತರ ಶುರುವಾಗಿರುವುದೇ ಆರ್.ಚಂದ್ರು ಜೊತೆ ಪವನ್ ಕಲ್ಯಾಣ್ ಸಿನಿಮಾ ಮಾಡ್ತಾರೆ ಅನ್ನೋ ಗುಸುಗುಸು. ತೆಲುಗಿನಲ್ಲಿ ಕನ್ನಡದವರು ಚಿತ್ರ ಮಾಡುವುದು ಹೊಸದೇನಲ್ಲ. ಒಂದು ಕಾಲದಲ್ಲಿ ನಡೆದು ನಿಂತೇ ಹೋಗಿದ್ದ ಸಂಪ್ರದಾಯ ಇದೀಗ ಮತ್ತೆ ಶುರುವಾಗಿದೆ. ಪ್ರಶಾಂತ್ ನೀಲ್ ಪ್ರಭಾಸ್ ಹಾಗೂ ಎನ್‍ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದರೆ, ಎ.ಹರ್ಷ ಗೋಪಿಚಂದ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಖುದ್ದು ಉಪೇಂದ್ರ ನಿರ್ದೇಶನದ ಚಿತ್ರಗಳಿಗೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಚಂದ್ರು ಅವರು ಕೂಡಾ ಕನ್ನಡದ ಚಿತ್ರಗಳನ್ನು ಈಗಾಗಲೇ ತೆಲುಗಿಗೆ ವರ್ಗಾಯಿಸಿ ಗೆಲುವನ್ನೂ ಕಂಡಿದ್ದಾರೆ. ಹೀಗಿರುವಾಗ ಕಬ್ಜ ಜೋಶ್`ನಲ್ಲಿ ತೇಲುತ್ತಿರುವ ಚಂದ್ರುಗೆ ಇನ್ನಷ್ಟು ಖುಷಿ ಕೊಡೋ ಸುದ್ದಿ ಇದೆ ಅನ್ನೋದು ಟಾಲಿವುಡ್ ಅಂಗಳದ ಸುದ್ದಿ.
ಶಿವಣ್ಣ ಮತ್ತು ಸುದೀಪ್ ಇಬ್ಬರೂ ಇರುವ ಚಿತ್ರದಲ್ಲಿ ಉಪೇಂದ್ರ ಹೀರೋ. ಆದರೆ ಮೊದಲೇ ಹೇಳಿದ್ದಂತೆ ಚಿತ್ರದ ನಿಜವಾದ ಹೀರೋಗಳು ಟೆಕ್ನಿಷಿಯನ್ಸ್. ಹೀಗಾಗಿಯೇ ಚಿತ್ರದ ಮೇಕಿಂಗ್, ಕಥೆ, ಚಿತ್ರಕಥೆ, ಚಕಚಕನೆ ಕಥೆ ಸಾಗುವ ವೇಗ.. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.