ಕಬ್ಜ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. ಎಲ್ಲಾ ಕಾತರ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದೆ. ಅಭಿಮಾನಿಗಳು ಬೆಳಗ್ಗೆಯೇ ಕಬ್ಜ ನೋಡಿ ಆನಂದಿಸುತ್ತಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದೆ. ಕಬ್ಜ ಸಿನಿಮಾ 7 ಭಾಷೆಗಳಲ್ಲಿ ರಿಲೀಸ್ ಆಗಿದೆ. ಸುಮಾರು 50ಕ್ಕೂ ಅಧಿಕ ದೇಶಗಳಲ್ಲಿ ಕಬ್ಜ ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ತೆರೆಗೆ ಬಂದಿದೆ. ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿರುವ ಕಬ್ಜ ಅಭಿಮಾನಿಗಳು ಹಾಗೂ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಲ್ಲ. ನಿರೀಕ್ಷೆಗೆ ತಕ್ಕಂತೆ ಅಲ್ಲ, ನಿರೀಕ್ಷೆಯನ್ನೂ ಮೀರಿ ಜನರ ಮೆಚ್ಚುಗೆ ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಕಬ್ಜ ಬರೋಬ್ಬರಿ 450 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಇಂದು ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ಅವರ ಜನ್ಮ ದಿನ. ಅನೇಕ ಚಿತ್ರಮಂದಿರಗಳಲ್ಲಿ ಅಪ್ಪು ಕಟೌಟ್ ಕೂಡ ರಾರಾಜಿಸುತ್ತಿದೆ. ರಾಜಧಾನಿಯಲ್ಲೇ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.
ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. iದೀಗ ಮೂವರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ರಿಯಲ್ ಸ್ಟಾರ್‌ಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜ ಬಾಕ್ಸಾಫೀಸಿಗೆ ರಂಗು ತಂದಿದೆ.