` ಉರಿ ಗೌಡ, ನಂಜೇಗೌಡರ ಬಗ್ಗೆ ಸಿನಿಮಾ ಮಾಡ್ತಾರಂತೆ ಮುನಿರತ್ನ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಉರಿ ಗೌಡ, ನಂಜೇಗೌಡರ ಬಗ್ಗೆ ಸಿನಿಮಾ ಮಾಡ್ತಾರಂತೆ ಮುನಿರತ್ನ..!
ಉರಿ ಗೌಡ, ನಂಜೇಗೌಡರ ಬಗ್ಗೆ ಸಿನಿಮಾ ಮಾಡ್ತಾರಂತೆ ಮುನಿರತ್ನ..!

ಉರಿಗೌಡ ಮತ್ತು ನಂಜೇಗೌಡ. ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ಹೆಸರು. ಟಿಪ್ಪು ಸುಲ್ತಾನ್ನ್ನು ಕೊಂದವರು ಉರಿಗೌಡ ಮತ್ತು ನಂಜೇಗೌಡ ಎನ್ನುತ್ತಿದೆ ಬಿಜೆಪಿ. ಅದಕ್ಕೆ ದಾಖಲೆಗಳೂ ಇವೆ ಎನ್ನುತ್ತಿದೆ. ಈ ಕುರಿತು ಇತ್ತೀಚೆಗೆ ಟಿಪ್ಪುವಿನ ನಿಜ ಕನಸುಗಳು ಎಂಬ ನಾಟಕವೂ ಬಂದಿದ್ದು, ಭಾರೀ ಜನಪ್ರಿಯವಾಗಿದೆ. ಅಡ್ಡಂಡ ಕಾರ್ಯಪ್ಪನವರ ನಾಟಕ ತುಂಬಿದ ಗೃಹಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಲ್ಲ..ಇಲ್ಲ.. ಉರಿಗೌಡ ಮತ್ತು ನಂಜೇಗೌಡ ಎಂಬ ವ್ಯಕ್ತಿಗಳೇ ಇತಿಹಾಸದಲ್ಲಿ ಇಲ್ಲ. ಅವೆರಡೂ ಕಪೋಲಕಲ್ಪಿತ ಪಾತ್ರಗಳು ಎನ್ನುತ್ತಿವೆ ಕಾಂಗ್ರೆಸ್ ಮತ್ತು ಜೆಡಿಎಸ್. ಇದರ ನಡುವೆಯೇ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಮುನಿರತ್ನ.

ಶ್ರೀರಂಗಪಟ್ಟಣದಲ್ಲಿ ಸುಲ್ತಾನನಾಗಿ ಆಡಳಿತ ಮಾಡುತ್ತಿದ್ದ ಟಿಪ್ಪುವನ್ನು ಮಂಡ್ಯದ ಉರಿಗೌಡ, ನಂಜೇಗೌಡ ಕೊಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಸಚಿವರೂ ಆಗಿರುವ ಚಿತ್ರ ನಿರ್ಮಾಪಕ ಮುನಿರತ್ನ ಅವರು ಈಗ ‘ಉರಿಗೌಡ ನಂಜೇಗೌಡ’ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣದ ಬಗ್ಗೆ ಕರ್ನಾಟಕ ಫಿಲಂ ಚೇಂಬರ್ನಲ್ಲಿಯೂ ಟೈಟಲ್ ನೊಂದಣಿಯನ್ನೂ ಮಾಡಲಾಗಿದೆ. ಇನ್ನು ಮುನಿರತ್ನ ಅವರಿಂದ ಉರಿಗೌಡ ನಂಜೇಗೌಡ ಕಥೆ, ಚಿತ್ರಕಥೆ ಸಿದ್ಧವಾಗಲಿದೆ. ಸಿನಿಮಾ ನಿರ್ಮಾಣವಾಗಿ ಬೆಳ್ಳಿ ತೆರೆಗೆ ಬರುವುದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಅಷ್ಟರೊಳಗೆ ರಾಜ್ಯ ವಿಧಾನಸಭಾ ಚುನಾವಣೆ ಕೂಡ ಮುಗಿದು ಹೋಗಬಹುದು. ಆದರೆ, ಸಿನಿಮಾ ಮಾಡ್ತಾರಂತೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿರುವುದಂತೂ ಹೌದು.

ಮುನಿರತ್ನ ರಾಜರಾಜೇಶ್ವರಿ ನಗರದ ಶಾಸಕ. ಅದಕ್ಕೂ ಮುನ್ನ ಚಿತ್ರರಂಗದಲ್ಲಿ ಪ್ರಸಿದ್ಧವಾಗಿರುವ ನಿರ್ಮಾಪಕರೂ ಹೌದು. ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಮುನಿರತ್ನ ಈ ಬಾರಿ ರಾಜಕೀಯ ಬ್ಯಾಕ್ ಗ್ರೌಂಡ್ ಮತ್ತು ಇತಿಹಾಸದ ಸಿನಿಮಾ ಮಾಡಲು ಹೊರಟಿರುವುದೇ ಬಿಗ್ ನ್ಯೂಸ್.