ಕಬ್ಜ. ಉಪೇಂದ್ರ, ಸುದೀಪ್, ಶಿವರಾಜ್ ಕುಮಾರ್, ಶ್ರೇಯಾ ಸರಣ್ ಅಭಿನಯದ ಈ ಸಿನಿಮಾ ಈ ವರ್ಷದ ಅತೀ ನಿರೀಕ್ಷಿತ ಸಿನಿಮಾ. ಐಎಂಡಿಬಿ ರೇಟಿಂಗ್‍ನಲ್ಲೂ ನಂ.1 ಸ್ಥಾನ ಗಿಟ್ಟಿಸಿರುವ ಈ ಕಬ್ಜ ಚಿತ್ರದ ಹವಾ ಈಗ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯಲ್ಲಿ ದೊಡ್ಡ ಕ್ರೇಜ್ ಹುಟ್ಟುಹಾಕಿದೆ. ಆರ್.ಚಂದ್ರು ನಿರ್ದೇಶನದ ಸಿನಿಮಾದ ಹಾಡುಗಳೂ ಸಂಚಲನ ಮೂಡಿಸಿವೆ. ಮೇಕಿಂಗ್ ಅಂತೂ ಚಿತ್ರೋದ್ಯಮದ ಗಣ್ಯಾತಿಗಣ್ಯರಿಂದ ಹೊಗಳಿಸಿಕೊಂಡಿದೆ. ಈ ಚಿತ್ರದ ಬುಕ್ಕಿಂಗ್ ಇವತ್ತಷ್ಟೇ ಓಪನ್ ಆಗಿದೆ. ಎಲ್ಲ ಕಡೆ ಬುಕ್ಕಿಂಗ್ ಓಪನ್ ಆದ ಕೆಲವೇ ಕ್ಷಣಗಳಲ್ಲಿ ಹವಾ ಎಬ್ಬಿಸಿದೆ.
ಬೆಳಗ್ಗೆ 6 ಗಂಟೆ 1 ನಿಮಿಷಕ್ಕೆ ಓಪನ್ ಆದ ಬುಕ್ಕಿಂಗ್‍ಗೆ ಕಾಯುತ್ತಿದ್ದವಂತೆ ಹಲವು ಶೋಗಳು ಥಟ್ಟಂತ ಬುಕ್ಕಿಂಗ್ ಆಗಿವೆ. ಬೆಂಗಳೂರಿನ ರಾಜ್ಕುಮಾರ್ ರಸ್ತೆ ಒರಾಯಿನ್ ಮಾಲ್ನ ಪಿವಿಆರ್ನ ಎರಡು ಸ್ಕ್ರೀನ್ನಲ್ಲಿ 10 ಶೋಗಳಿಗೆ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಮಾರ್ಚ್ 17ರ ಎಲ್ಲ ಹತ್ತು ಶೋಗಳಿಗೆ ಈಗಾಗಲೇ ಬಹುತೇಕ ಸಂಪೂರ್ಣ ಬುಕಿಂಗ್ ಆಗಿ ಹೋಗಿದೆ. ಇದೇ ಮಲ್ಟಿಪ್ಲೆಕ್ಸ್ನ ಮಾರ್ಚ್ 18 ರ ಶೋಗೆ ಸಹ ಬುಕಿಂಗ್ ಜಾರಿಯಲ್ಲಿದೆ. ಇನ್ನು ಮೈಸೂರಿನ ಹಬಿಟಾಟ್ ಮಾಲ್ನ ಡಿಸಿಆರ್ ಮಲ್ಟಿಪ್ಲೆಕ್ಸ್ನಲ್ಲಿ ಸಹ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಅಲ್ಲಿ ಮೊದಲ ದಿನವೇ 14 ಶೋ ನೀಡಲಾಗಿದ್ದು ಎರಡು ಶೋಗಳಿಗೆ ಬಹುತೇಕ ಎಲ್ಲ ಸೀಟುಗಳು ಬುಕ್ ಆಗಿದ್ದರೆ, ಉಳಿದ ಶೋಗಳಿಗೆ ಬೇಗ-ಬೇಗನೆ ಬುಕಿಂಗ್ ನಡೆಯುತ್ತಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆ ಆಗುತ್ತಿದೆ.
ಸದ್ಯಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ಗಳಲ್ಲಿ ಮಾತ್ರವೇ ಆನ್ಲೈನ್ ಬುಕಿಂಗ್ ಓಪನ್ ಆಗಿದೆ. ಹೈದರಾಬಾದ್ನಲ್ಲಿ ನಾಲ್ಕು ಚಿತ್ರಮಂದಿರಗಳಲ್ಲಿ ಮಾತ್ರವೇ ಬುಕಿಂಗ್ ಓಪನ್ ಆಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಚಿತ್ರಮಂದಿರಗಳು ಹಾಗೂ ಶೋಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಕಬ್ಜ ಸಿನಿಮಾದ ತೆಲುಗು ಆವೃತ್ತಿಯನ್ನು ತೆಲುಗು ಚಿತ್ರರಂಗದ ಜನಪ್ರಿಯ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ಅರುಗಳು ವಿತರಣೆ ಮಾಡುತ್ತಿದ್ದಾರೆ. ಇನ್ನು ಕೇರಳ ರಾಜ್ಯದಲ್ಲಿ ಕಬ್ಜ ಸಿನಿಮಾವನ್ನು ಎಲ್ಜಿಎಫ್ ಹೆಸರಿನ ವಿತರಣಾ ಸಂಸ್ಥೆ ವಿತರಿಸುತ್ತಿದೆ. ತಮಿಳುನಾಡಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲೈಕಾ, ಕನ್ನಡದ ಕಬ್ಜ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಇನ್ನು ಹಿಂದಿಯಲ್ಲಿ ಜನಪ್ರಿಯ ನಿರ್ಮಾಪಕ ಹಾಗೂ ವಿತರಕ ಆನಂದ್ ಪಂಡಿತ್ ಅವರು ಸಿನಿಮಾದ ವಿತರಣೆ ಮಾಡಲಿದ್ದಾರೆ.
ಅಂದಾಜು 100 ಕೋಟಿ ಬಜೆಟ್ನಲ್ಲಿ 'ಕಬ್ಜ' ಸಿನಿಮಾ ನಿರ್ಮಾಣ ಆಗಿರುವುದಾಗಿ ಹೇಳಲಾಗ್ತಿದೆ. ಚಿತ್ರದಲ್ಲಿ ಶ್ರಿಯಾ ಶರಣ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೋಸಾನಿ ಕೃಷ್ಣ ಮುರಳಿ, ಕಬೀರ್ ದುಹಾನ್ ಸಿಂಗ್, ಸುನಿಲ್ ಪುರಾನಿಕ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 40ರ ದಶಕದಿಂದ ಶುರುವಾಗುವ ಕಾಲ್ಪನಿಕ ಗ್ಯಾಂಗ್ಸ್ಟರ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಉಪ್ಪಿ ಗ್ಯಾಂಗ್ಸ್ಟರ್ ಅರ್ಕೇಶ್ವರ ಆಗಿ ಕಾಣಿಸಿಕೊಂಡಿದ್ದಾರೆ.