ಕಬ್ಜ. ಚಿತ್ರದಲ್ಲಿರೋ ಮೂವರು ಸ್ಟಾರ್ಸ್ ಕನ್ನಡಿಗರ ಹೃದಯ ಸಾಮ್ರಾಟರು. ಸುದೀಪ್, ಉಪೇಂದ್ರ ಹಾಗೂ ಶಿವಣ್ಣ ಮೂವರೂ ಕರ್ನಾಟಕದ ಸೂಪರ್ ಸ್ಟಾರ್ಸ್. ಸುದೀಪ್ ಮತ್ತು ಉಪೇಂದ್ರ ತೆಲುಗು, ತಮಿಳಿನಲ್ಲಿಯೂ ಗೊತ್ತಿದೆಯಾದರೂ, ಕರ್ನಾಟಕದ ಪ್ರೀತಿಯ ಖದರೇ ಬೇರೆ. ಚಿತ್ರದಲ್ಲಿ ಬೇರೆ ಬೇರೆ ಭಾಷೆಯ ಖ್ಯಾತ ನಟ ನಟಿಯರು ನಟಿಸಿದ್ದಾರೆ. ಹಲವು ಭಾಷೆಗಳಲ್ಲಿ ರಿಲೀಸ ಆಗುತ್ತಿರೋ ಕಬ್ಜ ಚಿತ್ರದ ಮೂಲ ಕರ್ನಾಟಕ. ಆದರೆ ಕಬ್ಜ ಚಿತ್ರದ ಮೊದಲ ಹವಾ ಏಳುತ್ತಿರೋದು ಕರ್ನಾಟಕದಲ್ಲಿ ಅಲ್ಲ.
ಮಾರ್ಚ್ 17 ರಂದು ಬಿಡುಗಡೆ ಆಗಲಿರುವ ಕಬ್ಜ ಸಿನಿಮಾದ ಆನ್ಲೈನ್ ಟಿಕೆಟ್ ಬುಕಿಂಗ್ ಏಳು ದಿನಗಳ ಮುಂಚೆಯೇ ಆರಂಭವಾಗಿದೆಯಾದರೂ, ಅಭಿಮಾನಿಗಳು ಸಹ ಮೊದಲ ದಿನ, ಮೊದಲ ಶೋ ನೋಡಲು ಕಾತರರಾಗಿದ್ದರೂ ಅದು ಸಾಧ್ಯವಾಗಿರುವುದು ಬೆಂಗಳೂರಿನಲ್ಲ. ಈಗಾಗಲೇ ಟಿಕೆಟ್ ಆನ್ಲೈನ್ ಬುಕಿಂಗ್ ಆರಂಭವಾಗಿದೆ ಆದರೆ ಬೆಂಗಳೂರಿಗರು ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಇನ್ನೂ ತುಸು ಕಾಯಬೇಕಾಗಿದೆ. ಬೆಂಗಳೂರಿಗಿಂತಲೂ ಮೊದಲು ಹೈದರಾಬಾದ್ನಲ್ಲಿ ಕಬ್ಜ ಸಿನಿಮಾಕ್ಕೆ ಆನ್ಲೈನ್ ಟಿಕೆಟ್ ಬುಕಿಂಗ್ ತೆರೆಯಲಾಗಿದೆ.
ಹೈದರಾಬಾದ್ನ ಕುಕಟ್ಪಲ್ಲಿ ಏರಿಯಾದ ವಿಶ್ವನಾಥ ಹೆಸರಿನ ಚಿತ್ರಮಂದಿರದಲ್ಲಿ ಕಬ್ಜ ಸಿನಿಮಾದ ಆನ್ಲೈನ್ ಬುಕಿಂಗ್ ತೆರೆಯಲಾಗಿದೆ. ಸದ್ಯಕ್ಕೆ ಹೈದರಾಬಾದ್ನ ಈ ಒಂದು ಚಿತ್ರಮಂದಿರದಲ್ಲಿ ಮಾತ್ರವೇ ಟಿಕೆಟ್ ಬುಕ್ ಮಾಡಬಹುದಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇನ್ನೆರಡು ದಿನಗಳಲ್ಲಿ ಆನ್ಲೈನ್ ಟಿಕೆಟ್ ಬುಕಿಂಗ್ ಓಪನ್ ಆಗುವ ನಿರೀಕ್ಷೆ ಇದೆ.
ತೆಲುಗಿನಲ್ಲಿ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ಕಬ್ಜ ಸಿನಿಮಾದ ತೆಲುಗು ಆವೃತ್ತಿಯನ್ನು ರಿಲೀಸ್ ಮಾಡುತ್ತಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಉಪೇಂದ್ರ ಹಾಗೂ ಸುದೀಪ್ ಅವರಿಗೆ ದೊಡ್ಡ ಫ್ಯಾನ್ಸ್ ಬೇಸ್ ಇದೆ. ಶ್ರೇಯಾ ಬಗ್ಗೆ ಕ್ರೇಜ್ ಇದೆ. ಹಾಗಾಗಿ ಕಬ್ಜ ಸಿನಿಮಾ ತೆಲುಗು ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.
ತಮಿಳುನಾಡಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲೈಕಾ, ಕನ್ನಡದ ಕಬ್ಜ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಆರ್ಆರ್ಆರ್, ಪುಷ್ಪ, ಸೀತಾ ರಾಮಂ ಸಿನಿಮಾಗಳನ್ನು ವಿತರಣೆ ಮಾಡಿರುವ ಜೊತೆಗೆ, ರಜನೀಕಾಂತ್, ವಿಕ್ರಂ, ಸೂರ್ಯ, ಚಿರಂಜೀವಿ, ಧನುಶ್, ವಿಜಯ್, ಅಕ್ಷಯ್ ಕುಮಾರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹಿರಿಮೆ ಈ ಸಂಸ್ಥೆಗಿದೆ.
ಹಿಂದಿಯಲ್ಲಿ ಜನಪ್ರಿಯ ನಿರ್ಮಾಪಕ ಹಾಗೂ ವಿತರಕ ಆನಂದ್ ಪಂಡಿತ್ ಅವರು ಸಿನಿಮಾದ ವಿತರಣೆ ಮಾಡಲಿದ್ದಾರೆ. ಮುಂಬೈನಲ್ಲಿ ಚಿತ್ರತಂಡದ ಜೊತೆ ಸತತವಾಗಿ ಪ್ರಚಾರ ಮಾಡಿದ್ದಾರೆ ಆನಂದ್ ಪಂಡಿತ್.
ಕೇರಳದಲ್ಲಿ ಎಲ್ಜಿಎಫ್ ಹೆಸರಿನ ವಿತರಣಾ ಸಂಸ್ಥೆ ಕಬ್ಜ ಸಿನಿಮಾ ವಿತರಿಸುತ್ತಿದೆ. ಈ ಹಿಂದೆ ಕೆಜಿಎಫ್ 2, 777 ಚಾರ್ಲಿ, ಕಾಂತಾರ ಸಿನಿಮಾಗಳು ಕೇರಳದಲ್ಲಿ ಚೆನ್ನಾಗಿ ಪ್ರದರ್ಶನ ಕಂಡಿದ್ದವಾದ್ದರಿಂದ ಈ ಸಿನಿಮಾ ಸಹ ಚೆನ್ನಾಗಿ ಪ್ರದರ್ಶನ ನೀಡುವ ನಿರೀಕ್ಷೆ ಇದೆ.