ಇದು ಒಂದು ರೀತಿಯಲ್ಲಿ ಚಕ್ರವರ್ತಿಗಳ ಸಮಾಗಮ. ಒಬ್ಬರು ಅಭಿನಯ ಚಕ್ರವರ್ತಿ. ಮತ್ತೊಬ್ಬರು ಸೆನ್ಸೇಷನ್‍ಗೆ ಬಾಸ್. ಇದೀಗ ಅವರಿಬ್ಬರ ಜೊತೆ ಕರುನಾಡ ಚಕ್ರವರ್ತಿ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಶಿವ ರಾಜ್ ಕುಮಾರ್. ಕಬ್ಜ' ಚಿತ್ರದಲ್ಲಿ 'ನಾಟ್ಯಸಾರ್ವಭೌಮ' ಶಿವರಾಜ್ ಕುಮಾರ್ ಕೂಡ ಅಭಿನಯಿಸಿದ್ದಾರೆ. ಉಪೇಂದ್ರ, ಸುದೀಪ್ ಹಾಗೂ ಶಿವರಾಜ್ ಕುಮಾರ್.. ಕನ್ನಡ ಚಿತ್ರರಂಗದ ಈ ಮೂವರು ಸ್ಟಾರ್ಗಳು 'ಕಬ್ಜ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಮೂವರು ಸ್ಟಾರ್ಗಳನ್ನ ಒಟ್ಟಿಗೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಲಭಿಸಿದೆ. ಶಿವಣ್ಣ ಪಾತ್ರ ಏನಿರಬಹುದು..? ಅದು ಸಸ್ಪೆನ್ಸ್. ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರವೇನು ಎಂಬುದು ಬಹಿರಂಗವಾಗಿಲ್ಲ.
'ಕಬ್ಜ' ಚಿತ್ರದ ಹಾಡೊಂದನ್ನು ಇತ್ತೀಚೆಗಷ್ಟೇ ಶಿಡ್ಲಘಟ್ಟದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಭಾಗವಹಿಸಿದ್ದು ವಿಶೇಷವಾಗಿತ್ತು. ಇಂದು 'ಕಬ್ಜ' ಚಿತ್ರದ ಟ್ರೇಲರ್ ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಜನ್ಮದಿನ.. ಅಂದ್ರೆ ಮಾರ್ಚ್ 17 ರಂದು 'ಕಬ್ಜ' ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಪುನೀತ್ ರಾಜ್ಕುಮಾರ್ ಅವರ ಸವಿನೆನಪಿನಲ್ಲಿ 'ಕಬ್ಜ' ಸಿನಿಮಾ ತೆರೆಗೆ ಬರಲಿದೆ.
ಆರ್.ಚಂದ್ರು ಅವರು ಕಬ್ಜ ಚಿತ್ರವನ್ನು ಲೇಟ್ ಮಾಡುತ್ತಿದ್ದಾರೆ ಎಂದು ಶಿವಣ್ಣ ವೇದಿಕೆಯೊಂದರಲ್ಲಿ ಕ್ಲಾಸ್ ತೆಗೆದುಕೊಂಡಿದ್ದರು. ಶಿವಣ್ಣ ಅವರಿಗೆ ನನಗೆ ಬುದ್ದಿ ಹೇಳೋ ಎಲ್ಲ ಅಧಿಕಾರ ಇದೆ ಎಂದು ಉತ್ತರ ಕೊಟ್ಟಿದ್ದರು ಆರ್.ಚಂದ್ರು. ಈ ಹಿಂದೆ ಆರ್.ಚಂದ್ರು ಅವರ ಜೊತೆ ಮೈಲಾರಿ ಚಿತ್ರ ಮಾಡಿದ್ದರು ಚಂದ್ರು. 13 ವರ್ಷಗಳ ನಂತರ ಮತ್ತೊಮ್ಮೆ ಚಂದ್ರು ಸಿನಿಮಾದಲ್ಲಿ ಶಿವಣ್ಣ ನಟಿಸಿದ್ದಾರೆ. ಉಪೇಂದ್ರ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದ ಶಿವಣ್ಣ, ಕಿಚ್ಚ ಸುದೀಪ್ ಜೊತೆಯಲ್ಲೂ 2ನೇ ಸಿನಿಮಾ ಮಾಡುತ್ತಿದ್ದಾರೆ. ಮಲ್ಟಿಸ್ಟಾರ್ ಸಿನಿಮಾ ಸಾಕಪ್ಪಾ ಸಾಕು ಎಂದಿದ್ದ ಸುದೀಪ್, ಉಪ್ಪಿ-ಶಿವಣ್ಣ ಜೊತೆ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಉಪೇಂದ್ರ ಜೊತೆ ಸುದೀಪ್ ಅವರಿಗೂ ಇದು 2ನೇ ಸಿನಿಮಾ.