ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಚಿತ್ರಗಳಲ್ಲಿ ಜೋಡಿಯಾಗಿ ಮಿಂಚಿದ್ದ.. ಗೆದ್ದಿದ್ದ ರವಿಚಂದ್ರನ್ ಮತ್ತು ಶಿಲ್ಪಾ ಶೆಟ್ಟಿ ಜೋಡಿ ಮತ್ತೊಮ್ಮೆ ತೆರೆ ಮೇಲೆ ಒಂದಾಗುವ ಸೂಚನೆ ಕೊಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರದಲ್ಲಿ ರವಿಚಂದ್ರನ್ ಅಣ್ಣಯ್ಯಪ್ಪ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಅಣ್ಣಯ್ಯಪ್ಪನಿಗೆ ಜೋಡಿಯಾಗಲಿದ್ದಾರಂತೆ ಶಿಲ್ಪಾ ಶೆಟ್ಟಿ.
1998ರಲ್ಲಿ ತೆರೆಕಂಡ 'ಪ್ರಿತ್ಸೋದ್ ತಪ್ಪಾ' ಸಿನಿಮಾದ ಮೂಲಕ ರವಿಚಂದ್ರನ್ ಅವರೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ಶಿಲ್ಪಾ ಶೆಟ್ಟಿ, 2003ರಲ್ಲಿ 'ಒಂದಾಗೋಣ ಬಾ' ಹಾಗೂ 2005ರಲ್ಲಿ ಉಪೇಂದ್ರ ನಟನೆಯ 'ಆಟೋ ಶಂಕರ್' ಚಿತ್ರದಲ್ಲಿ ನಟಿಸಿದ್ದರು. ಈಗ 17 ವರ್ಷಗಳ ನಂತರ ಅವರು ಮತ್ತೆ ಕನ್ನಡ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಸದ್ಯದಲ್ಲೇ ಅನೌನ್ಸ್ ಮಾಡಲಿದೆ.
ಬಾಲಿವುಡ್ ನಟ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಲಿದ್ದು ಮುಂದಿನ ಸರದಿ ನಟಿ ಶಿಲ್ಪಾ ಶೆಟ್ಟಿ ಅವರದ್ದು ಎನ್ನಲಾಗಿದೆ. ಧ್ರುವ ಸರ್ಜಾ ರೌಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಧ್ರುವ ಸರ್ಜಾ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆಯನ್ನು ಕೆಡಿ ಸಿನಿಮಾದಲ್ಲಿ ಹೇಳಲಾಗುತ್ತಿದ್ದು, 70ರ ದಶಕದ ಗ್ಯಾಂಗ್ವಾರ್, ರೌಡಿಸಂ ಚಿತ್ರದಲ್ಲಿದೆಯಂತೆ. 1970ರಲ್ಲಿ ಅಂಡರ್ವರ್ಲ್ಡ್ ಲೋಕದಲ್ಲಿ ಹಲವರನ್ನು ಫೈಟರ್ಗಳು ಎಂದು ಕರೆಯುತ್ತಿದ್ದರು. ಅಂತಹ ಒಬ್ಬ ಫೈಟರ್ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರು ಬಾಡಿ ಬಿಲ್ಡ್ ಮಾಡಿಕೊಂಡಿದ್ದಾರೆ.