ಕಬ್ಜದ ಮತ್ತೊಂದು ಹಾಡು ಅದ್ಧೂರಿಯಾಗಿ ರಿಲೀಸ್ ಆಗಿದೆ. ಆರ್.ಚಂದ್ರು ನಿರ್ಮಾಣ ಮತ್ತು ನಿರ್ದೇಶನದ ಸುರ್ ಸುರ್ ಬತ್ತಿ ಸಾಂಗು, ಪಡ್ಡೆ ಹೈಕಳ ಎದೆಯಲ್ಲಿ ಸರ್ ಸರ್ ಅಂತಾ ಸುರ್ ಸುರ್ ಬತ್ತಿ ಇಟ್ಟಿದೆ. ಈ ಹಾಡನ್ನು ಬಿಡುಗಡೆ ಮಾಡುವ ಮುನ್ನ ದ ಸೆಲೆಬ್ರೇಷನ್ ಸಾಂಗ್ ಆಫ್ ದ ಇಯರ್ ಎಂದು ಹೇಳಿಲದ್ದ ಚಿತ್ರತಂಡ ಮಾತನ್ನು ಉಳಿಸಿಕೊಂಡಿದೆ. ಕೇಳುಗರಿಗೆ ಹಾಗೂ ನೋಡುಗರಿಗೆ ಇಬ್ಬರಲ್ಲೂ ಕಿಚ್ಚು ಹತ್ತಿಸಿದೆ ಈ ಹಾಡು.
ಬಸಣ್ಣಿಯಾಗಿ ಬಾಂಬೆ ಮಿಠಾಯಿ ತಿನ್ನಿಸಿದ್ದ ತಾನ್ಯಾ ಹೋಪ್, ಸುರ್ ಸುರ್ ಬತ್ತಿಯಲ್ಲಿ ಸೊಂಟ ಬಳುಕಿಸಿದ್ದಾರೆ. ಉಪೇಂದ್ರ ವಿಂಟೇಜ್ ಸೂಟ್ ಧರಿಸಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಪ್ರಮೋದ್ ಮರವಂತೆ ಈ ಹಾಡಿನ ಸಾಹಿತ್ಯ ಬರೆದಿದ್ದು, ಏರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ದನಿ ನೀಡಿದ್ದಾರೆ
ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ, ನಟ ಸಾರ್ವಭೌಮ ಹಾಗೂ ಯುವರತ್ನ ಮತ್ತು ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ಹಾಡಿಗೆ ನೃತ್ಯ ಸಂಯೋಜಿಸಿದ್ದ ಜಾನಿ ಮಾಸ್ಟರ್ ಕೊರಿಯೋಗ್ರಫಿ ಅದ್ಭುತವಾಗಿ ಮೂಡಿ ಬಂದಿದೆ ಅನ್ನೋದು ಲಿರಿಕಲ್ ವಿಡಿಯೋದಲ್ಲಿನ ಕಟ್ಸ್ಗಳಿಂದಲೇ ಗೊತ್ತಾಗುತ್ತಿದೆ.
ಉಪ್ಪಿ, ಸುದೀಪ್, ಶ್ರೇಯಾ ಸರಣ್ ಅಭಿನಯದ ಚಿತ್ರದ ಹಾಡು ರಿಲೀಸ್ ಆಗಿದ್ದು ಶಿಡ್ಲಘಟ್ಟದಲ್ಲಿ. ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಯಿಂದ ಬಿಡುಗಡೆಯಾದ ಹಾಡಿದು. ಶಿವರಾತ್ರಿಯಂದು ನಮಾಮಿ ಹಾಡಿನ ಮೂಲಕ ಭಕ್ತಿಯ ಉತ್ತುಂಗ ತೋರಿಸಿದ್ದ ಚಂದ್ರು, ಈ ಹಾಡಿನಲ್ಲಿ ಮಾದಕತೆಯ ಮತ್ತೊಂದು ಮಜಲು ತೋರಿಸಿದ್ದಾರೆ.