` ಚಿತ್ರರಂಗಕ್ಕೆ ಬಜೆಟ್`ನಲ್ಲಿ ಮಿಠಾಯಿ ಕೊಟ್ಟರಾ ಬೊಮ್ಮಾಯಿ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರರಂಗಕ್ಕೆ ಬಜೆಟ್`ನಲ್ಲಿ ಮಿಠಾಯಿ ಕೊಟ್ಟರಾ ಬೊಮ್ಮಾಯಿ?
CM Basavraj Bommaiah

ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರದ ಈ ಅವಧಿಯ ಕಟ್ಟಕಡೆಯ ಬಜೆಟ್ ಮಂಡಿಸಿದ್ದಾರೆ. ಇನ್ನೇನು ತಿಂಗಳಲ್ಲಿ ಘೋಷಣೆಯಾಗಲಿರೋ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅವರದ್ದೇ ಸರ್ಕಾರ. ಗೆಲ್ಲದೇ ಹೋದರೆ, ಕಾಂಗ್ರೆಸ್‍ನವರೋ.. ಜೆಡಿಎಸ್‍ನವರೋ.. ಅಥವಾ ಎರಡು ಪಕ್ಷಗಳು ಸೇರಿಯೋ.. ಯಾವುದೋ ಒಂದು ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ. ಆದರೆ ಈ ಬಜೆಟ್ಟಿನಲ್ಲಿ ರಾಜ್ಯ ಸರ್ಕಾರ ಚಿತ್ರರಂಗಕ್ಕೆ ಏನಾದರೂ ಕೊಡಲಿದ್ದಾರೆ ಎಂಬ ನಿರೀಕ್ಷೆಯಂತೂ ಇತ್ತು. ಅಂಬರೀಷ್, ಪುನೀತ್ ರಾಜ್`ಕುಮಾರ್ ಸ್ಮಾರಕಗಳ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದರು ಬೊಮ್ಮಾಯಿ. ಚಿತ್ರರಂಗದ ಹಲವು ಸಮಸ್ಯೆಗಳಿಗೆ ಸರ್ಕಾರದ ಬಜೆಟ್`ನಲ್ಲಿ ಪರಿಹಾರ ಸಿಗುವ ಭರವಸೆಯಂತೂ ಇತ್ತು. ಸಿನಿಮಾ ಮಂದಿಯ ಜೊತೆ ಬೊಮ್ಮಾಯಿಯವರ ಒಡನಾಟ ಬೇರೆ ಸಿಎಂಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಇದೆ. ಹೀಗಾಗಿಯೇ ನಿರೀಕ್ಷೆಯೂ ಹೆಚ್ಚಿನದಾಗಿಯೇ ಇತ್ತು. ಆದರೆ ಚಿತ್ರರಂಗಕ್ಕೆ ಸಿಕ್ಕಿದ್ದು ಎರಡೇ ಎರಡು ಘೋಷಣೆ.

ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಜ್ಯದ ಖಿieಡಿ-2 ನಗರಗಳಲ್ಲಿ 100 ರಿಂದ 200 ಆಸನಗಳ ಸಾಮರ್ಥ್ಯವುಳ್ಳ ಮಿನಿ ಥಿಯೇಟರ್ಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಚಿತ್ರಮಂದಿರಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಈ ಹಿಂದೆಯೇ ಜನತಾ ಚಿತ್ರಮಂದಿರಗಳ ನಿರ್ಮಾಣದ ಬಗ್ಗೆ ಹಲವು ಬಾರಿ ಪ್ರಸ್ತಾಪವಾಗಿದ್ದರೂ, ಅಷ್ಟೇನೂ ಪರಿಣಾಮಕಾರಿಯಾಗಿ ಆ ಬಗ್ಗೆ ಕೆಲಸಗಳು ಆಗಿರಲಿಲ್ಲ. ಇದೀಗ ರಾಜ್ಯ ಸರ್ಕಾರವು ಮಿನಿ ಥಿಯೇಟರ್ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕೆ ಪ್ರೋತ್ಸಾಹ ಎಂದು ಬಜೆಟ್`ನಲ್ಲಿ ಹೇಳಲಾಗಿದ್ದರೂ, ಕಾರ್ಯಯೋಜನೆ ರೂಪದಲ್ಲಿ ಇಲ್ಲ. ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಿದೆ ಈ ಘೋಷಣೆ.

ಆಟೋ ರಾಜ ಎಂದೇ ಜನಪ್ರಿಯರಾಗಿದ್ದವರು ನಟ ಶಂಕರ್ ನಾಗ್. ಈಗಲೂ ಕೂಡ ಪ್ರತಿಯೊಂದು ಆಟೋ ನಿಲ್ದಾಣದಲ್ಲ ಅವರ ಫೋಟೋ ಇದ್ದೇ ಇರುತ್ತದೆ. ಆಟೋಗಳ ಮೇಲೆ ಅವರ ಫೋಟೋಗಳನ್ನು ಹಾಕಿರುತ್ತಾರೆ. ಅಷ್ಟೊಂದು ಪ್ರೀತಿಯಿಂದ ಆಟೋ ಚಾಲಕರು ಶಂಕರ್ ನಾಗ್ ಅವರನ್ನು ಆರಾಧಿಸುತ್ತಾರೆ. ಇದೀಗ ರಾಜ್ಯ ಸರ್ಕಾರವು ಆಟೋ ಮತ್ತು ಟ್ಯಾಕ್ಸಿ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಹೊರಟಿದ್ದು, ಅದಕ್ಕೆ ಶಂಕರ್ ನಾಗ್ ಅವರ ಹೆಸರನ್ನೇ ಇರಿಸಿರುವುದು ವಿಶೇಷ. 'ನಗರ ಮತ್ತು ಪಟ್ಟಣಗಳಲ್ಲಿ ಖಾಲಿ ಇರುವ ಜಾಗಗಳನ್ನು ಗುರುತಿಸಿ ಖ್ಯಾತ ನಟರಾದ ದಿವಂಗತ ಶಂಕರ್ನಾಗ್ ರವರ ಹೆಸರಿನಲ್ಲಿ ಟ್ಯಾಕ್ಸಿ ಮತ್ತು ಆಟೋ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು..' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಮತ್ತೊಮ್ಮೆ ಇದೂ ಕೂಡಾ ಘೋಷಣೆಗೆ ಸೀಮಿತವಾಗಿದೆ. ಎಲ್ಲಿ, ಎಷ್ಟು ಕಡೆ, ಯಾವ್ಯಾವ ನಗರ/ಪಟ್ಟಣಗಳಲ್ಲಿ ಎಂಬ ಉಲ್ಲೇಖವೂ ಇಲ್ಲ. ಬಜೆಟ್ ಪುಸ್ತಕದಲ್ಲಿ ಒಟ್ಟಾರೆಯಾಗಿ ನಾಲ್ಕು ಲೈನಿನಲ್ಲಿ ಇಡೀ ಚಿತ್ರರಂಗ ಮುಗಿದು ಹೋಗುತ್ತದೆ.

ಚಿತ್ರನಗರಿ ಸೇರಿದಂತೆ ಚಿತ್ರರಂಗದ ನಿರೀಕ್ಷೆಗಳು ದೊಡ್ಡದಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಕೂಡಾ ಬೆಂಗಳೂರಿಗೆ ಬಂದಿದ್ದಾಗ ಚಿತ್ರರಂಗದ ಗಣ್ಯರೊಂದಿಗೆ ಚರ್ಚಿಸಿದ್ದರು. ಇದೆಲ್ಲದರ ಫಲಿತಾಂಶ ಬಜೆಟ್`ನಲ್ಲಿ ಮೂಡಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಅದಾವುದೂ ಆಗಿಲ್ಲ. ಒಟ್ಟಿನಲ್ಲಿ ಎರಡು ಘೋಷಣೆ ಬಂದಿವೆ. ಮುಂದಿನ ಬಜೆಟ್`ನಲ್ಲಿಯೂ ಈ ಘೋಷಣೆಗಳು ಅಕ್ಷರಶಃ ಹೀಗೆಯೇ ಇದ್ದರೂ ಆಶ್ಚರ್ಯ ಪಡಬೇಕಿಲ್ಲ.