ಮಂಗಳೂರಿಗೆ ಬಂದಿರುವ ಜೈಲರ್ ಟೀಂ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ಮಂಗಳೂರಿನ ಪಿಲಿಕುಳ ಗತ್ತಿನ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ರಜನಿಕಾಂತ್ ಹಾಗೂ ಶಿವಣ್ಣ ನಡುವಿನ ಮಾತಿನ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಅಂದಹಾಗೆ ಈಗ ಶೂಟಿಂಗ್ ಆಗುತ್ತಿರುವ ಮನೆ ಕಾಂತಾರ ಮನೆ ಎಂದೇ ಫೇಮಸ್ ಆಗಿರುವ ಮನೆ. ಕಾಂತಾರದಲ್ಲಿ ಆರಂಭದಲ್ಲಿ ಬರುವ ರಾಜ ನೆಲೆಸಿರುವ ಮನೆ ಬರುತ್ತದಲ್ಲ.. ಆ ಮನೆಯಲ್ಲಿಯೇ ಈಗ ಜೈಲರ್ ಚಿತ್ರೀಕರಣ ನಡೆಯುತ್ತಿರುವುದು.
ಅಣ್ಣಾತ್ತೆ ನಂತರ ರಜನಿ ನಟಿಸುತ್ತಿರುವ ಚಿತ್ರ ಜೈಲರ್. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಮಲಯಾಲಂ ಸ್ಟಾರ್ ಮೋಹನ್ ಲಾಲ್ ಕೂಡಾ ನಟಿಸುತ್ತಿದ್ದಾರೆ. ಜಾಕಿ ಶ್ರಾಫ್, ತೆಲುಗು ಕಮಿಡಿಯನ್ ಸುನಿಲ್, ಯೋಗಿ ಬಾಬು ಕೂಡಾ ಇರುವ ಚಿತ್ರದಲ್ಲಿ ತಮನ್ನಾ ಹಾಗೂ ರಮ್ಯಕೃಷ್ಣ ಇಬ್ಬರೂ ನಟಿಸುತ್ತಿದ್ದಾರೆ.
ರಜನಿ ಸರ್ ನನ್ನನ್ನು ಚಿಕ್ಕಂದಿನಿಂದಲೂ ಅಪ್ಪಾಜಿ ಕಾಲದಿಂದಲೂ ನೋಡಿದವರು. ಆದರೆ ಒಟ್ಟಿಗೇ ನಟಿಸುತ್ತಿರುವುದು ಇದೇ ಮೊದಲು. ನನ್ನನ್ನು ರಜನಿ ಸರ್ ತುಂಬಾ ಆತ್ಮೀಯತೆಯಿಂದ ಕರೆದುಕೊಂಡರು. ಅವರ ಜೊತೆ ನನಗಿದು ಮೊದಲ ಸಿನಿಮಾ ಎಂದು ಅನ್ನಿಸಲೇ ಇಲ್ಲ. ಇಲ್ಲಿ ಡ್ರಾಮಾ ಸೀಕ್ವೆನ್ಸ್ ಶೂಟಿಂಗ್ ನಡೆಯುತ್ತಿದೆ. ಫೈಟ್ಸ್ ಸೀನ್ ಅಲ್ಲ. ನಾನು ಈ ಚಿತ್ರದಲ್ಲಿ ವಿಲನ್ ಅಲ್ಲ, ಗೆಸ್ಟ್ ರೋಲ್ ಎಂದಿದ್ದಾರೆ ಸ್ವತಃ ಶಿವಣ್ಣ. ಆದರೆ ಚಿತ್ರದ ನನ್ನ ಪಾತ್ರವನ್ನು ತೆರೆಯ ಮೇಲೇ ನೋಡಿ. ಚೆನ್ನಾಗಿದೆ. ಈಗಲೇ ಹೇಳಿದರೆ ಏನು ಚೆಂದ ಎಂದಿದ್ದಾರೆ ಶಿವರಾಜ್ ಕುಮಾರ್. ಇದು ದಿಲೀಪ್ ನೆಲ್ಸನ್ ನಿರ್ದೇಶನದ ಸಿನಿಮಾ.