ಕನ್ನಡದ ಸೆಂಚುರಿ ಸ್ಟಾರ್ ಮತ್ತು ದ.ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇಬ್ಬರೂ ಒಟ್ಟಿಗೇ ಜೈಲರ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವಂಥದ್ದೇ. ಆ ಮೂಲಕ ತಮಿಳಿಗೆ ಎಂಟ್ರಿ ಕೊಡುತ್ತಿರುವ ಶಿವಣ್ಣ, ರಜನಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಜೈಲರ್ ಚಿತ್ರದ ಕೆಲವು ದೃಶ್ಯಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ರಜನಿ ತಮ್ಮ ಚಿತ್ರಗಳಲ್ಲಿ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಮೈಸೂರಿನ ಒಂದಾದರೂ ದೃಶ್ಯ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿಯೇ ಈಗಾಗಲೇ ಮೈಸೂರಿನ ಚಿತ್ರೀಕರಣ ಮುಗಿಸಿದ್ದು, ಇದೀಗ ಮಂಗಳೂರಿನಲ್ಲಿ ಜೈಲರ್ ತಂಡ ಬೀಡುಬಿಟ್ಟಿದೆ.
ರಜನಿಕಾಂತ್ ನಟನೆಯ ಜೈಲು ಸಿನಿಮಾದ ಶೂಟಿಂಗ್ ಗಾಗಿ ಅವರು ಮಂಗಳೂರಿಗೆ ಬಂದಿದ್ದು, ಜೊತೆಗೆ ಮಂಗಳೂರಿನ ಹಲವು ದೇವಸ್ಥಾನಗಳಿಗೂ ಅವರು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಮಂಗಳೂರಿಗೆ ಸಿನಿಮಾ ಚಿತ್ರೀಕರಣ ನಡೆಯಲಿದೆ. ಈ ಶೂಟಿಂಗ್ ಮಧ್ಯೆಯೂ ಅವರು ಮಂಗಳೂರಿನ ಪ್ರಮುಖ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಚಿತ್ರತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಜೈಲರ್ ಚಿತ್ರದಲ್ಲಿ ಶಿವಣ್ಣ ಮತ್ತು ರಜನಿಕಾಂತ್ ಪಾತ್ರವೇನು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲವಾದರೂ, ಗಾಂಧಿನಗರದ ಮೂಲಗಳು ಶಿವಣ್ಣ ವಿಲನ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೇ ಮೊದಲ ಬಾರಿ ಇಬ್ಬರೂ ಒಟ್ಟಿಗೇ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ರಜನಿಗೆ ತಮನ್ನಾ ಹೀರೋಯಿನ್. ಬೀಸ್ಟ್ ಚಿತ್ರ ಮಾಡಿದ್ದ ದಿಲೀಪ್ ಡೈರೆಕ್ಷನ್ ಇದೆ.
ಅಷ್ಟೇ ಅಲ್ಲ, 1981ರಲ್ಲಿ ರಜನಿಕಾಂತ್ ಗರ್ಜನೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಕನ್ನಡದ ಸಿನಿಮಾಗಳಲ್ಲಿ ರಜನಿ ನಟಿಸಿಯೇ ಇಲ್ಲ. ಇದೀಗ ಹೊಂಬಾಳೆಯವರ ಜೊತೆ ರಜನಿಕಾಂತ್ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ರಜನಿಕಾಂತ್ ರಾಜ್ಯಕ್ಕೆ ಬಂದಿರುವ ಸಮಯದಲ್ಲಿಯೇ ಈ ಮಾತುಕತೆಯೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.