ರಿಷಬ್ ಶೆಟ್ಟಿ ಆಗಾಗ್ಗೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳೋದು ಅಪರೂಪವೇನಲ್ಲ. ಚಿತ್ರರಂಗದ ಹಲವರಿಗೆ ಇದು ಗೊತ್ತಿರುವಂತದ್ದೇ. ರಿಷಬ್ ಪತ್ನಿ, ತಂದೆ, ತಾಯಿ ಸೇರಿದಂತೆ ಕೆಲವೇ ಕೆಲವರಿಗೆ ಮಾತ್ರ ಆ ಸಮಯದಲ್ಲಿ ಕನೆಕ್ಟ್ ಆಗುವ ರಿಷಬ್ ಶೆಟ್ಟಿ, ಬೇರೆಯದೇ ಲೋಕಕ್ಕೆ ಜರ್ನಿ ಹೊರಟು ಬಿಡುತ್ತಾರೆ. ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೊರಡುವ ರಿಷಬ್ ಶೆಟ್ಟಿ, ಏನು ಮಾಡಲಿದ್ದಾರೆ.. ಬೇರೇನಿಲ್ಲ. ಕಾಂತಾರ 2 ಚಿತ್ರದ ಚಿತ್ರಕಥೆಗೆ ಕೂತುಕೊಳ್ಳಲಿದ್ದಾರೆ.
ಕಾಂತಾರ 2 ಬರುವುದು ಪಕ್ಕಾ. ಟ್ರೇಲರ್ ಕೂಡಾ ರೆಡಿ ಆಗಿದೆ ಎಂದು ಹೇಳಿರುವ ರಿಷಬ್ ಶೆಟ್ಟಿ, ಸ್ಕ್ರಿಪ್ಟ್ ಕೆಲಸಕ್ಕೆ ಪಟ್ಟಾಗಿ ಕುಳಿತುಕೊಳ್ಳಲಿದ್ದಾರೆ. ಇತ್ತೀಚೆಗೆ ಪತ್ರಕರ್ತರ ಜೊತೆ ಸಂವಾದದಲ್ಲಿ ಮಾತನಾಡಿದ್ದ ರಿಷಬ್ ಶೆಟ್ಟಿ ಕಾಂತಾರ ಚಿತ್ರಕ್ಕೆ ಸಿಕ್ಕ ಲಾಭ, ತಮಗೂ ಸೇರಿದಂತೆ ಇಡೀ ಕಾಂತಾರ ಚಿತ್ರತಂಡಕ್ಕೆ ಸಿಕ್ಕ ಡಬಲ್ ಪೇಮೆಂಟ್ ಎಲ್ಲವನ್ನೂ ಹಂಚಿಕೊಂಡರು. ವಿಜಯ್ ಕಿರಗಂದೂರು ಅವರ ದೊಡ್ಡತನವನ್ನು ಅಪಾರವಾಗಿ ಹೊಗಳಿದ ರಿಷಬ್ ಸಿನಿಮಾದಿಂದ ಲಾಭ ಬಂದಿದ್ದಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಇಡೀ ತಂಡಕ್ಕೆ ಇನ್ನೊಂದು ರೌಂಡ್ ಪೇಮೆಂಟ್ ಮಾಡಿದೆ. ಅದು ಹೊಂಬಾಳೆ ಫಿಲ್ಮ್ಸ್ನ ದೊಡ್ಡತನ. ಈ ಬಗ್ಗೆ ನನ್ನ ಸೌಂಡ್ ಡಿಸೈನರ್ ಅವರು ಒಂದು ಮಾತು ಹೇಳಿದ್ರು. ಅವರು 25 ವರ್ಷಗಳಿಂದ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಹೇಳಿದ್ದೇನೆಂದರೆ, ನನ್ನ 25 ವರ್ಷಗಳ ಅನುಭವದಲ್ಲಿ ಒಬ್ಬ ನಿರ್ಮಾಪಕ ಸಿನಿಮಾ ಗೆದ್ದಿದೆ ಎಂಬ ಕಾರಣಕ್ಕೆ ಚಿತ್ರದ ಕಲಾವಿದರಿಗೆ, ತಂತ್ರಜ್ಞರಿಗೆ ಇನ್ನೊಮ್ಮೆ ಪೇಮೆಂಟ್ ಮಾಡಿದ್ದು ಇದೇ ಮೊದಲು ಎಂದು. ಅದು ನಿರ್ಮಾಪಕ ವಿಜಯ್ ಅವರ ದೊಡ್ಡಗುಣ.. ಎಂಬ ಅವರ ಮಾತಿನಲ್ಲಿ ವಿಜಯ್ ಕಿರಗಂದೂರು ಅವರ ಬಗ್ಗೆ ಹೊಗಳಿಕೆಯೂ ಇತ್ತು.
ಇಷ್ಟೆಲ್ಲ ಆಗಿ ರಿಷಬ್ ಶೆಟ್ಟಿ ಪಡೆದ ಪೇಮೆಂಟ್ ಎಷ್ಟು ಎಂದರೆ ರಿಷಬ್ ಶೆಟ್ಟಿ ಕೊಟ್ಟ ಉತ್ತರ ನೋ ಕಮೆಂಟ್ಸ್. ಅಂದಹಾಗೆ ಕಾಂತಾರ ರಿಲೀಸ್ ಆದ ವೇಳೆ ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿ ಬಗ್ಗೆ ಒಪೀನಿಯನ್ ಕೇಳಿದಾಗ ರಿಷಬ್ ನೋ ಕಮೆಂಟ್ಸ್ ಎಂದಿದ್ದರು. ಅದು ಆಗ ಎಡ-ಬಲ ಪಂಥೀಯರ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಆದರೆ, ಈ ಬಾರಿ ಸಂಭಾವನೆ ವಿಷಯದ ಬಗ್ಗೆ ನೋ ಕಮೆಂಟ್ಸ್ ಎಂದಿದ್ದಾರೆ.