ಮಫ್ತಿ. ಶಿವಣ್ಣ ಅವರ ಕೆರಿಯರಿನಲ್ಲಿ ವಿಭಿನ್ನ ಸಿನಿಮಾ. ಡೈಲಾಗುಗಳಿಲ್ಲದೆ.. ಕಣ್ಣಲ್ಲೇ ಅಭಿಮಾನಿಗಳನ್ನು ಗೆದ್ದಿದ್ದರು ಶಿವಣ್ಣ. ಶ್ರೀಮುರಳಿ ಹೀರೋ ಆಗಿದ್ದರೂ ಶಿವಣ್ಣ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದರು. ನರ್ತನ್ ನಿರ್ದೇಶನದ ಚಿತ್ರ ಭರ್ಜರಿ ಹಿಟ್ ಆಗಿತ್ತು. 2017ರಲ್ಲಿ ಬಂದಿದ್ದ ಸಿನಿಮಾ ತಮಿಳಿಗೆ ರೀಮೇಕ್ ಕೂಡಾ ಆಗಿದೆ. ಭೈರತಿ ರಣಗಲ್ ಹೆಸರಿನಲ್ಲಿ ಚಿತ್ರ ಮಾಡುವ ಬಗ್ಗೆ ಹಲವು ಬಾರಿ ಕೇಳಿ ಬಂದಿತ್ತಾದರೂ ಹೆಸರು ಹೇಳುವಷ್ಟಕ್ಕೆ ಮಾತ್ರವೇ ಸೀಮಿತವಾಗಿತ್ತು. ಈಗ ಅದು ಅಧಿಕೃತವಾಗಿದೆ. ಇತ್ತೀಚೆಗೆ ವೇದ ಚಿತ್ರವನ್ನು ತೆಲುಗುನಲ್ಲಿ ರಿಲೀಸ ಮಾಡುವ ಮುನ್ನ ನಡೆದ ಈವೆಂಟ್‍ನಲ್ಲಿ ಸ್ವತಃ ಶಿವರಾಜ್ ಕುಮಾರ್ ಅವರೇ ಈ ವಿಷಯ ಹೇಳಿಕೊಂಡಿದ್ದಾರೆ.
ನರ್ತನ್ ಕಥೆ ಹೇಳಿದ್ದಾರೆ. ಕಥೆ ಚೆನ್ನಾಗಿ ಮೂಡಿ ಬಂದಿದೆ. ಇದು ಸೀಕ್ವೆಲ್ ಅಲ್ಲ. ಪ್ರೀಕ್ವೆಲ್. ಬೈರತಿ ರಣಗಲ್ ಯಾಕೆ ಬದಲಾದ? ಯಾವ ಕಾರಣಕ್ಕೆ ಅಪರಾಧ ಜಗತ್ತಿನ ದೊರೆಯಾದ ಎಂಬುದರ ಸುತ್ತ ಕಥೆ ಇದೆ. ಸ್ಕ್ರಿಪ್ಟ್ ಲಾಕ್ ಆಗಿದೆ ಎಂದು ಹೇಳಿಕೊಂಡಿದ್ದಾರೆ ಶಿವಣ್ಣ. ಮಫ್ತಿ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಬೈರತಿ ರಣಗಲ್ ಪಾತ್ರ ಜೈಲಿಗೆ ಹೋಗುತ್ತೆ. ಜೈಲಿನಲ್ಲಿರು ದೃಶ್ಯದೊಂದಿಗೇ ಚಿತ್ರ ಮುಗಿಯುತ್ತೆ. ಅಲ್ಲಿಂದ ಶುರುವಾಗುವ ಕಥೆ ಬೈರತಿ ರಣಗಲ್ ಹೇಗೆ ಉದ್ಭವವಾದ ಅನ್ನೋ ಕಥೆಯನ್ನ ಹೊಸ ಚಿತ್ರದಲ್ಲಿ ಹೇಳುವ ಪ್ರಯತ್ನ ಚಿತ್ರತಂಡದ್ದು.
ಚಿತ್ರ ಈಗಲೇ ಶುರುವಾಗುತ್ತಾ? ಸಾಧ್ಯವಿಲ್ಲ. ಸದ್ಯಕ್ಕೆ ಶಿವಣ್ಣ ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ ಬ್ಯುಸಿ. ಯೋಗರಾಜ್ ಭಟ್ಟರ ಕರಟಕ ದಮನಕ, ಶ್ರೀನಿ ನಿರ್ದೇಶನದ ಘೋಸ್ಟ್, ರಜನಿಕಾಂತ್ ಜೊತೆಗಿನ ಜೈಲರ್, ವಿಶಾಲ್ ಜೊತೆಗಿನ ಕ್ಯಾಪ್ಟನ್ ಮಿಲ್ಲರ್ ಸದ್ಯಕ್ಕೆ ಫ್ಲೋರ್ ಮೇಲಿರುವ ಚಿತ್ರಗಳು.
ಇನ್ನು ನೀ ಸಿಗೋವರೆಗೂ.. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅರ್ಜುನ್ ಜನ್ಯ ಜೊತೆ 45 ಚಿತ್ರ ಟೇಕಾಫ್ ಆಗಬೇಕಿದೆ. ಅಶ್ವತ್ಥಾಮ, ಸತ್ಯಮಂಗಲ. ಎಸ್.ಆರ್.ಕೆ., ಆರ್.ಡಿ.ಎಕ್ಸ್. ಚಿತ್ರಗಳು ಘೋಷಣೆಯಾಗಿವೆ. ಟೈಟಲ್ ಇಡದ ಚಿತ್ರಗಳೂ ಲಿಸ್ಟಿನಲ್ಲಿವೆ. ಇವೆಲ್ಲದರ ಮಧ್ಯೆ ಮಫ್ತಿ 2 ಚಿತ್ರದ ಕಥೆ ಲಾಕ್ ಆಗಿದೆ. ಅಂದಹಾಗೆ ಮಫ್ತಿ ಚಿತ್ರದ ಪ್ರೀಕ್ವೆಲ್`ಗೂ ಜಯಣ್ಣ-ಭೋಗೇಂದ್ರ ಅವರೇ ನಿರ್ಮಾಪಕರಾಗ್ತಾರಾ? ಗೊತ್ತಿಲ್ಲ. ಕೆ.ಪಿ.ಶ್ರೀಕಾಂತ್ ಕೂಡಾ ಉತ್ಸಾಹದಲ್ಲಿದ್ದಾರೆ. ಫೈನಲ್ ಆಗುವುದಕ್ಕೆ ಸ್ವಲ್ಪ ಸಮಯ ಬೇಕು.