ಕಾಪಿರೈಟ್ ವಿವಾದಕ್ಕೆ ಅರೆಸ್ಟ್ ಮಾಡಲು ಅವಕಾಶ ಇದೆಯಾ? ಇಂತಹದ್ದೊಂದು ಅಚ್ಚರಿಯ ಆಘಾತ ಕಾಂತಾರ ಚಿತ್ರತಂಡಕ್ಕೆ ಎದುರಾಗಿತ್ತು. ವರಾಹರೂಪಂ ಹಾಡು ತಮ್ಮಿಂದ ಕಾಪಿ ಮಾಡಿದ್ದು ಕೇರಳದಲ್ಲಿ ಕೇಸ್ ಹಾಕಲಾಗಿದೆ. ಅಲ್ಲ, ಅದು ಕದ್ದಿದ್ದಲ್ಲ ಎಂದು ಕಾಂತಾರ ತಂಡ ವಾದಿಸುತ್ತಿದೆ. ಈ ಮೊದಲು ಹಾಡನ್ನು ಚಿತ್ರದಿಂದಲೇ ತೆಗೆದು ಹಾಕಲಾಗಿತ್ತು. ಹೊಸ ವರ್ಷನ್ ಬಳಸಿಕೊಳ್ಳಲಾಗಿತ್ತು ನಂತರ ಅದಕ್ಕೆ ತಡೆಯಾಜ್ಞೆ ತಂದು ಈಗ ಒಟಿಟಿಯಲ್ಲಿ ಹಳೆಯ ವರಾಹ ರೂಪಂ.. ಹಾಡೇ ಲಭ್ಯವಿದೆ. ಇದರ ನಡುವೆ ಕೇಸ್ ಕೂಡಾ ನಡೆಯುತ್ತಿತ್ತು. ಈ ವಿಚಾರಣೆ ವೇಳೆ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ.ಬದ್ರುದ್ದೀನ್ ಅವರು ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ ನಿಂದ ಆದೇಶ ಬರೋವರೆಗೂ ವರಾಹ ರೂಪಂ ಹಾಡನ್ನು ಬಳಕೆ ಮಾಡುವಂತಿಲ್ಲ’ ಎನ್ನುವ ಷರತ್ತೂ ಸೇರಿದಂತೆ ಹಲವು ಷರತ್ತುಗಳು ಹಾಕಿತ್ತು.
ಅಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಅರೆಸ್ಟ್ ಮಾಡಿದರೆ 50 ಸಾವಿರ ರೂ. ಶ್ಯೂರಿಟಿ ಮೇಲೆ ಜಾಮೀನು ನೀಡಬೇಕು ಎಂದು ಹೇಳಿತ್ತು. ಇದು ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಅವರನ್ನು ಅರೆಸ್ಟ್ ಮಾಡುವುದಕ್ಕೂ ಅವಕಾಶವಿದೆ ಎಂಬ ಸೂಚನೆ ಎಂಬಂತಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಚಿತ್ರತಂಡಕ್ಕೆ ಸುಪ್ರೀಂಕೋರ್ಟ್ ರಿಲೀಫ್ ಕೊಟ್ಟಿದೆ.
ಸದ್ಯಕ್ಕೆ ವರಾಹರೂಪಂ ಹಾಡಿನ ಬಳಕೆ ಮಾಡಲು ಅನುಮತಿ ನೀಡಿರುವ ಸುಪ್ರೀಂಕೋರ್ಟ್, ಬಂಧನಕ್ಕೂ ತಡೆಯಾಜ್ಞೆ ಕೊಟ್ಟಿದೆ. ಆದರೆ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದೆ. ಸದ್ಯಕ್ಕೆ ಕಾಂತಾರ ಚಿತ್ರತಂಡಕ್ಕೆ ಇದು ರಿಲೀಫ್.