` ವಾಲ್ಮೀಕಿ ಜಾತ್ರೆಗೆ ಆಹ್ವಾನವೇ ಇರಲಿಲ್ಲ : ಸುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಾಲ್ಮೀಕಿ ಜಾತ್ರೆಗೆ ಆಹ್ವಾನವೇ ಇರಲಿಲ್ಲ : ಸುದೀಪ್
ವಾಲ್ಮೀಕಿ ಜಾತ್ರೆಗೆ ಆಹ್ವಾನವೇ ಇರಲಿಲ್ಲ : ಸುದೀಪ್

ದಾವಣಗೆರೆಯ ಹರಿಹರದಲ್ಲಿರೋ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ. ಅದು ವಾಲ್ಮೀಕಿ ಜನಾಂಗದವರ ಒಗ್ಗಟ್ಟಿನ ಸಮಾವೇಶ. ಸಾಮಾನ್ಯವಾಗಿ ವಾಲ್ಮೀಕಿ ಸಮುದಾಯದ ಹಿರಿಯರು, ಸೆಲಬ್ರಿಟಿಗಳನ್ನೆಲ್ಲ ಕರೆದು ಗೌರವಿಸುತ್ತಾರೆ. ಈ ಹಿಂದೆ ಕಿಚ್ಚ ಸುದೀಪ್ ಕೂಡಾ ವಾಲ್ಮೀಕಿ ಜಾತ್ರೆಯಲ್ಲಿ ಭಾಗವಹಿಸಿದ್ದವರೇ. ಆದರೆ ಈ ಬಾರಿ ಹಾಗಾಗಲಿಲ್ಲ. ಸುದೀಪ್ ಬರುತ್ತಾರೆಂದು ಅವರ ಸಾವಿರಾರು  ಅಭಿಮಾನಿಗಳು ಬಂದಿದ್ದರು. ಯಾವಾಗ ಬರುತ್ತಾರೆ ಎಂದು ಕಾತರಿಸುತ್ತಿದ್ದರು. ಬರಲಿಲ್ಲ. ಅದು ವಿಪರೀತಕ್ಕೂ ಹೋಯ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಭಾಷಣಕ್ಕೂ ಅಡ್ಡಿಯಾಗುವಷ್ಟರ ಮಟ್ಟಿಗೆ ಹೋಯಿತು.

ಸಿಎಂ ಬೊಮ್ಮಾಯಿಯವರಂತೂ ನಿಮ್ಮ ಸುದೀಪ್, ನನ್ನ ದೀಪು. ಅವನನ್ನು ಈಗಲೇ ಬರುವಂತೆ ಹೇಳುತ್ತೇನೆ ಎಂದೆಲ್ಲ ಹೇಳಿದರು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿಗಳಂತೂ ತಾಳ್ಮೆ ಕಳೆದುಕೊಂಡು ಏಯ್ ಕುತ್ಕೊಳ್ರೋ. ಸುಮ್ಮನೆ ಕುಳಿತುಕೊಂಡರೆ ಸುದೀಪ್ ಬರುತ್ತಾರೆ. ಗಲಾಟೆ ಮಾಡಿದ್ರೆ ಬರೋದಿಲ್ಲ. ಸುದೀಪ್ ಅವರು ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇದೇ ರೀತಿ ಗಲಾಟೆ ಮುಂದುವರಿಸಿದರೆ ನಾನೇ ಬರುವುದು ಬೇಡ ಎಂದು ಸುದೀಪ್ಗೆ ಹೇಳುತ್ತೇನೆ. ಅವರು ಬರುವವರೆಗೆ ಶಾಂತಿಯಿಂದ ವರ್ತಿಸಬೇಕು. ಗಲಾಟೆ, ಕಿರಿಕಿರಿ ಮಾಡಿದರೆ ಕಾರ್ಯಕ್ರಮ ಕ್ಯಾನ್ಸಲ್ ಮಾಡ್ತೀನಿ ಎಂದು ಸಿಟ್ಟಿನಿಂದಲೇ ಹೇಳಿದರು.

ಆದರೂ ಸುದೀಪ್ ಬರಲಿಲ್ಲ. ಅಭಿಮಾನಿಗಳು ಶಾಂತರಾಗಲಿಲ್ಲ. ನೂರಾರು ಕುರ್ಚಿಗಳನ್ನು ಮುರಿದು ಹಾಕಿದರು ಸುದೀಪ್ ಫ್ಯಾನ್ಸ್. ದಾಂಧಲೆಯೇ ನಡೆದು ಹೋಯಿತು. ಒಂದು ಸಮಾಜದ ಸಮಾವೇಶದಲ್ಲಿ ಬೇರೆಯದೇ ವಾತಾವರಣ ಸೃಷ್ಟಿಯಾಗಿ ಸಂಘಟಕರಂತೂ ಅಸಹಾಯಕರಾಗಿ ನೋಡುವಂತಾಯಿತು. ಆದರೆ ಸುದೀಪ್ ಅವರ ಹೇಳಿಕೆ ಬೇರೆಯದೇ ಕಥೆ ಹೇಳಿದೆ.

ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ ..ಮುಂದೆ ಖಂಡಿತ ಬರುವೆ.ಪ್ರೀತಿ ಇರಲಿ.ಶಾಂತರೀತಿಯಿಂದ ವರ್ತಿಸಿ ...

ಇದು ಸುದೀಪ್ ಮಾಡಿರುವ ಟ್ವೀಟ್. ಸುದೀಪ್ ಅವರಿಗೆ ಕಾರ್ಯಕ್ರಮದ ಬಗ್ಗೆ ಆಹ್ವಾನವೇ ಇರಲಿಲ್ಲ ಎಂಬುದು ಸುದೀಪ್ ಹೇಳುತ್ತಿರುವ ಮಾತು. ಸುದೀಪ್ ಅವರಿಗೇ ಒಂದು ಮಾತು ತಿಳಿಸದೆ, ಸುದೀಪ್ ಬರುತ್ತಾರೆಂದು ಸುದ್ದಿ ಮಾಡಿದ್ದೇಕೆ? ಮುಖ್ಯಮಂತ್ರಿ ಮತ್ತು ಪೀಠದ ಸ್ವಾಮೀಜಿಗಳಿಗೂ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಯಿತೇ.. ಇದು ಎಲ್ಲರನ್ನೂ ಕಾಡುತ್ತಿರೋ ಪ್ರಶ್ನೆ.