ಚಿತ್ರನಟಿ ಅಭಿನಯ ಅವರ ಸಂಕಷ್ಟ ಕಂಟಿನ್ಯೂ ಆಗಿದೆ. ಅಭಿನಯ ಅವರಿಗೆ ಇತ್ತೀಚೆಗೆ ಹೈಕೋರ್ಟ್ ಜೈಲು ಶಿಕ್ಷೆ ಪ್ರಕಟಿಸಿತ್ತು. ಅಭಿನಯ ಮತ್ತು ಅವರ ತಾಯಿಗೆ 5 ವರ್ಷ ಜೈಲು ಶಿಕ್ಷೆ ಘೋಷಿಸಿ ಶಿಕ್ಷೆ ನೀಡಿತ್ತು. ಅದಾದ ನಂತರ ಅಭಿನಯ ತಲೆಮರೆಸಿಕೊಂಡಿದ್ದಾರೆ. ಅಭಿನಯ, ಅವರ ತಾಯಿ, ಸಹೋದರ ಮೂವರೂ ಪತ್ತೆಯಿಲ್ಲ. ಹೀಗಾಗಿ ಪೊಲೀಸರು ಈ ಮೂವರ ವಿರುದ್ಧವೂ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣದ ಹಿಸ್ಟರಿ : ಏನಿದು ಪ್ರಕರಣ ಎಂದು ನೋಡಿದರೆ 20 ವರ್ಷ ಹಿಂದೆ ಹೋಗಬೇಕು. 2002ರದಲ್ಲಿ ಅಭಿನಯ ಅವರ ಅತ್ತಿಗೆ ಲಕ್ಷ್ಮಿದೇವಿ ಅಭಿನಯ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದರು. ಚಂದ್ರಾ ಲೇಔಟ್‍ನಲ್ಲಿ ಕೇಸ್ ಆಗಿತ್ತು. ಅಭಿನಯ ಅಣ್ಣ ಶ್ರೀನಿವಾಸ್ ಎಂಬುವವರ ಪತ್ನಿಯೇ ದೂರು ನೀಡಿದ್ದ ಲಕ್ಷ್ಮಿದೇವಿ. ಅಭಿನಯ ಅವರಷ್ಟೇ ಅಲ್ಲ, ಪತಿ ಶ್ರೀನಿವಾಸ್ ಸೇರಿದಂತೆ ರಾಮಕೃಷ್ಣ, ಚೆಲುವರಾಜ್, ಜಯಮ್ಮ ವಿರುದ್ಧವೂ ಕೇಸ್ ಆಗಿತ್ತು. ಇವರಲ್ಲಿ ಪತಿ ಶ್ರೀನಿವಾಸ್ ಹಾಗೂ ರಾಮಕೃಷ್ಣ ಈಗ ಇಲ್ಲ.
ಲಕ್ಷ್ಮಿದೇವಿ ಅವರನ್ನು 1998ರಲ್ಲಿ ಶ್ರೀನಿವಾಸ್ ಮದುವೆಯಾಗಿದ್ದರು. ಮದುವೆಯಲ್ಲಿ 80 ಸಾವಿರ ಕ್ಯಾಷ್, 250 ಗ್ರಾಂ ಚಿನ್ನಾಭರಣ ಕೊಟ್ಟಿದ್ದರು. 1998ರಲ್ಲಿ. ಆದರೆ ಮದುವೆಯಾದ ಮೇಲೆ ಅಷ್ಟಕ್ಕೇ ನಿಲ್ಲದೆ ಮತ್ತೆ 1 ಲಕ್ಷ ತಗೊಂಡು ಬಾ ಎಂದು ತವರು ಮನೆಗೆ ಕಳಿಸಿದ್ದರಂತೆ. 20 ಸಾವಿರ ಕೊಟ್ಟಿದ್ದರೂ ಉಳಿದ ಹಣ ಎಲ್ಲಿ ಎಂದು ಕಿರುಕುಳ ಕೊಟ್ಟಿದ್ದರಂತೆ. ಅಲ್ಲದೆ ಅಭಿನಯ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ನನ್ನನ್ನೂ ಅದಕ್ಕೆ ತಳ್ಳಲು ನೋಡಿದ್ದರು ಎಂದು ಹೇಳಿಕೊಂಡಿದ್ದರು ಲಕ್ಷ್ಮೀದೇವಿ.
2012ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಅಭಿನಯ ವಿರುದ್ಧದ ಆರೋಪಗಳಿಗೆ ಶಿಕ್ಷೆ ಘೋಷಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅಭಿನಯ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದರು. ಜಿಲ್ಲಾ ಸೆಷನ್ಸ್ ಕೋರ್ಟಿನಲ್ಲಿ ಅಭಿನಯ ಮತ್ತವರ ವಿರುದ್ಧದ ಕೇಸುಗಳು ವಜಾ ಆಗಿದ್ದವು. ಈ ತೀರ್ಪನ್ನು ಪ್ರಶ್ನಿಸಿ ಲಕ್ಷ್ಮೀದೇವಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಶಿಕ್ಷೆ ಘೋಷಿಸಿತ್ತು. ಎ1 ಪತಿ ಶ್ರೀನಿವಾಸ್, ಎ2 ರಾಮಕೃಷ್ಣ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉಳಿದ ಮೂವರಿಗೆ ಶಿಕ್ಷೆ ಘೋಷಿಸಲಾಗಿತ್ತು. ಅಭಿನಯ ತಾಯಿ ಜಯಮ್ಮ ಎ3ಗೆ 5 ವರ್ಷ ಜೈಲು, ಎ4 ಚೆಲುವರಾಜ್ ಹಾಗೂ ಎ5 ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ ತೀರ್ಪು ಪ್ರಕಟವಾದ ನಂತರ ಮೂವರೂ ತಲೆಮರೆಸಿಕೊಂಡಿದ್ದಾರೆ.
ಲುಕ್ ಔಟ್ ನೋಟಿಸ್ ಎಂದರೆ ಏನು?
ಯಾವುದಾದರೂ ವ್ಯಕ್ತಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ವಿಚಾರಣೆಗಳೂ ಸಿಗದೆ ನಾಪತ್ತೆಯಾಗಿದ್ದರೆ ಅಂತಹವರನ್ನು ವಿದೇಶಕ್ಕೆ ತೆರಳದಂತೆ ತಡೆಯಲು ರೂಪಿಸಿರುವ ವ್ಯವಸ್ಥೆ. ಈ ಕಾನೂನು ಪ್ರಕಾರ ಆರೋಪಿಗಳ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಯಾಗಿದ್ದರೆ ಅಂತಹ ವ್ಯಕ್ತಿಗಳ ಬಗ್ಗೆ ವಿಶೇಷವಾಗಿ ವಿಮಾನ ನಿಲ್ದಾಣಗಳಲ್ಲಿ ನಿಗಾ ಇಡಲಾಗುತ್ತದೆ. ಅಂತಹವರು ಕಂಡ ತಕ್ಷಣ ಅರೆಸ್ಟ್ ಮಾಡುತ್ತಾರೆ. ಅಷ್ಟೇ ಅಲ್ಲ, ಅವರನ್ನು ಕಂಡ ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಬಹುದು. ಸಾಮಾನ್ಯವಾಗಿ ಲುಕ್ ಔಟ್ ನೋಟಿಸ್‍ಗೆ ಒಂದು ವರ್ಷದವರೆಗೆ ವ್ಯಾಲ್ಯೂ ಇರುತ್ತದೆ. ಆ ವೇಳೆಗೆ ಸಿಗದೇ ಹೋದರೆ ಸಂಬಂಧಪಟ್ಟವರು ಕೇಂದ್ರಕ್ಕೆ ಮಾಹಿತಿ ನೀಡಿ ಅದನ್ನು ವಿಸ್ತರಿಸಬಹುದು. ಲುಕ್ ಔಟ್ ನೋಟಿಸ್‍ನ್ನು ಕೋರ್ಟ್ ಮೂಲಕ ಕೇಂದ್ರದ ಅಧಿಕಾರಿಗಳಿಂದ ಜಾರಿ ಮಾಡುತ್ತಾರೆ.