ಬಸಣ್ಣಿ ಬಾ.. ಹಾಡು ಕಿವಿಗೆ ಬಿದ್ರೆ, ಕಣ್ಣಿಗೆ ಬಿದ್ರೆ.. ಇವತ್ತಿಗೂ ಪಡ್ಡೆ ಹುಡುಗರ ಪಂಚೇಂದ್ರಿಯಗಳೂ ಪವರ್ ಪಡೆದುಕೊಳ್ಳುತ್ತವೆ. ಭಟ್ಟರ ಲಿರಿಕ್ಸಿಗೆ ತಕ್ಕಂತೆ ಹೆಜ್ಜೆ ಹಾಕಿ ಮೋಡಿ ಮಾಡಿದ್ದರು ತಾನ್ಯಾ ಹೋಪ್. ಆ ತಾನ್ಯ ಹೋಪ್ ಇದೀಗ ಕಬ್ಜ ಚಿತ್ರತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾರ್ಚ್ 17ರಂದು ರಿಲೀಸ್ ಆಗಲಿರುವ ಕಬ್ಜ ಚಿತ್ರದ ಒಂದು ಹಾಡಿನ ಶೂಟಿಂಗ್ ಇನ್ನೂ ಬಾಕಿ ಇದೆ. ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಅದು ಮುಗಿದರೆ ಕಬ್ಜ ಉಳಿದ ಪ್ರಮೋಷನ್ ಕೆಲಸದತ್ತ ತೊಡಗಿಸಿಕೊಳ್ಳಲಿದೆ.
ಹಾಡಿನಲ್ಲಿ ಬಾಲಿವುಡ್ನ ಜಾಕ್ವೆಲಿನ್ ಫರ್ನಾಂಡಿಸ್ ಅಥವಾ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್ ಆರಂಭದಿಂದಲೂ ಇತ್ತು. ಇದೀಗ ಆ ಜಾಗಕ್ಕೆ ತಾನ್ಯಾ ಹೋಪ್ ಅವರ ಹೆಸರು ಅಂತಿಮಗೊಂಡಿದೆ. ಮುಂದಿನ ವಾರ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಉಪೇಂದ್ರ, ತಾನ್ಯಾ ಹೋಪ್ ಹಾಗೂ ನೂರಾರು ಡ್ಯಾನ್ಸರ್ಸ್ ಈ ಹಾಡಿನಲ್ಲಿ ಹೆಜ್ಜೆ ಹಾಕಲಿದ್ದಾರೆ. ತೆಲುಗು ಸಿನಿಮಾಗಳ ಮೂಲಕ ಫೇಮಸ್ ಆಗಿದ್ದ ತಾನ್ಯಾ ಹೋಪ್, 'ಯಜಮಾನ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾದಲ್ಲಿ 'ಬಸಣ್ಣಿ ಬಾ ಬಸಣ್ಣಿ ಬಾ..' ಹಾಡಿನಲ್ಲಿ ಕಾಣಿಸಿಕೊಂಡು, ಸಖತ್ ಫೇಮಸ್ ಆಗಿದ್ದರು.
ಈ ಹಾಡಿಗೂ ಜಾನಿ ಮಾಸ್ಟರ್ ಅವರೇ ಕೊರಿಯೋಗ್ರಫಿ ಮಾಡಲಿದ್ದಾರೆ. ಈ ಹಾಡಿಗಾಗಿಯೇ ಅದ್ಧೂರಿ ಸೆಟ್ ಹಾಕಲಾಗಿದ್ದು, ರಿಹರ್ಸಲ್ ನಡೆಯುತ್ತಿದೆ. ಉಪೇಂದ್ರ ಜೊತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸಿದ್ದ ತಾನ್ಯಾ ಹೋಪ್, ಇದೀಗ ಸ್ಪೆಷಲ್ ಸಾಂಗ್`ನಲ್ಲಿ ಕುಣಿದು ಕುಪ್ಪಳಿಸಲಿದ್ದಾರೆ.