` ``ಅಳಬಾರದು ಎಂದುಕೊಂಡು ತಡೆದುಕೊಳ್ಳುತ್ತೇನೆ. ಕೆಲವು ಸಾರಿ ಆಗಲ್ಲ'' - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
``ಅಳಬಾರದು ಎಂದುಕೊಂಡು ತಡೆದುಕೊಳ್ಳುತ್ತೇನೆ. ಕೆಲವು ಸಾರಿ ಆಗಲ್ಲ''
Shivarajkumar, Balakrishna Image

ಇದು ಶಿವಣ್ಣ ಮಾತು. ಹೈದರಾಬಾದ್`ನಲ್ಲಿ ವೇದ ಚಿತ್ರದ ಪ್ರೀ-ರಿಲೀಸ್ ಈವೆಂಟ್`ನಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಮಾತನಾಡಿದ ಮಾತಿದು. ವೇದ ಚಿತ್ರ ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ. ಅಲ್ಲಿ ರಿಲೀಸ್ ಅದ ಮಾರನೇ ದಿನವೇ ಕನ್ನಡದಲ್ಲಿ ಒಟಿಟಿಗೂ ಬರುತ್ತಿದೆ. ಚಿತ್ರದ ಬಿಡುಗಡೆಗೆ ಮುನ್ನ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಬಾಲಯ್ಯ ಮುಖ್ಯ ಅತಿಥಿ. ವೇದ ಚಿತ್ರತಂಡದ ಪ್ರತಿಯೊಬ್ಬರನ್ನೂ ಹೊಗಳಿದ ಬಾಲಯ್ಯ, ಚಿತ್ರದಲ್ಲಿರುವ ಆದಿತಿ ಸಾಗರ್, ಗಾನವಿ ಲಕ್ಷ್ಮಣ್, ಉಮಾಶ್ರೀ, ವೀನಾ ಪೊನ್ನಪ್ಪ, ಶ್ವೇತಾ ಚೆಂಗಪ್ಪ.. ಹೀಗೆ ಪ್ರತಿಯೊಬ್ಬರ ಹೆಸರನ್ನೂ ಹೇಳಿ ಮೆಚ್ಚಿಕೊಂಡರು. ಅದರಲ್ಲಿಯೂ ಆದಿತಿ ಸಾಗರ್ ಹೆಸರು ಹೇಳುವಾಗ ಬಾಲಕೃಷ್ಣ ಕಣ್ಣಿನಲ್ಲೂ ಮಿಂಚು ಹೊಳೆಯುತ್ತಿತ್ತು. ಮೆಚ್ಚುಗೆಯಿತ್ತು. ಸಾಹಸ ದೃಶ್ಯಗಳನ್ನು ಅಪಾರವಾಗಿ ಮೆಚ್ಚಿಕೊಂಡಿದ್ದರು ಬಾಲಯ್ಯ.

ಇದೇ ವೇಳೆ ವೇದಿಕೆಯಲ್ಲಿ ಪುನೀತ್ ಅವರ ವಿಟಿಯೊಂದನ್ನು ಪ್ರದರ್ಶನ ಮಾಡಲಾಯಿತು. ಆರಂಭದಲ್ಲಿ ಅಪ್ಪು ಬಗ್ಗೆ ಕೇಳಿದ ಪ್ರಶ್ನೆಗಳಿಗೆ ತುಸು ಗಂಭೀರವಾಗಿಯೇ ಉತ್ತರ ನೀಡಿದ್ದ ಶಿವಣ್ಣ, ವಿಡಿಯೋ ನೋಡುವಾಗಲೂ ಸ್ಥಿತಪ್ರಜ್ಞತೆ ಮೆರೆದರು. ಆದರೆ ಯಾವಾಗ ಅಪ್ಪು ಜೊತೆ ಸಲಗ ಈವೆಂಟ್`ನಲ್ಲಿ ಕುಣಿದಿದ್ದ ವಿಡಿಯೋ ತೆರೆ ಮೇಲೆ ಬಂತೋ ಶಿವಣ್ಣ ಭಾವುಕರಾಗಿಬಿಟ್ಟರು. ಕಣ್ಣೀರು ಕಾಣದಂತೆ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರು. ಪಕ್ಕದಲ್ಲಿಯೇ ಇದ್ದ ಪತ್ನಿ ಗೀತಾ ಹಾಗೂ ಬಾಲಕೃಷ್ಣ ಅವರೇ ಸಮಾಧಾನಪಡಿಸಿದರು.

ಅದಾದ ಮೇಲೆ ಮಾತನಾಡಿದ ಶಿವಣ್ಣ ಅಪ್ಪು ಹುಟ್ಟಿದಾಗ ನನಗೆ 13 ವರ್ಷ. ನನಗೆ ಅವನು ಎಂದಿಗೂ ತಮ್ಮ ಎಂದು ಅನ್ನಿಸಲಿಲ್ಲ. ಮಗನಂತಿದ್ದ. ಆ ಮುಖ ನೋಡಿದರೆ ಎಂಥಹವರಿಗೆ ಕಣ್ಣೀರು ಬರುತ್ತೆ. ಅಳಬಾರದು ಎಂದುಕೊಳ್ಳುತ್ತೇನೆ. ಕೆಲವೊಮ್ಮೆ ತಡೆಯೋಕೆ ಆಗಲ್ಲ. ಅಪ್ಪು ನಮ್ಮ ಹೃದಯದಲ್ಲಿ ಸದಾ ಶಾಶ್ವತವಾಗಿರುತ್ತಾನೆ ಎಂದು ಹೇಳಿದರು ಶಿವಣ್ಣ.