ಬಾನದಾರಿಯಲ್ಲಿ ಪುನೀತ್ ಪಯಣ. ಡಾ. ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಇಟ್ಟಿದ್ದು ಹೆಸರು. ರಸ್ತೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿವಂಗತ ಡಾ ಪುನೀತ್ ರಾಜಕುಮಾರ್ ಅವರ ಸಮಾಧಿಯನ್ನು ಅದ್ಭುತ ಸ್ಮಾರಕ ಮಾಡಲಾಗುವುದು. 'ರೆಬೆಲ್ ಸ್ಟಾರ್' ಅಂಬರೀಷ್ ಸ್ಮಾರಕ ಕಾರ್ಯ ಪೂರ್ಣಗೊಂಡಿದ್ದು, ಅದನ್ನು ಮಾರ್ಚ್ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡುವ ಬಗ್ಗೆ ಕೂಡಾ ಮಾಹಿತಿ ನೀಡಿದರು.
ನನ್ನ ಆತ್ಮೀಯ ಸ್ನೇಹಿತ ಅಂಬರೀಷ್ ಅವರ ಹೆಸರನ್ನು ರೇಸ್ಕೋರ್ಸ್ ರಸ್ತೆಗೆ ಇಡಲು ತೀರ್ಮಾನಿಸಿದ್ದೇನೆ. ಅವನ ಜೊತೆ ವಾರದಲ್ಲಿ ಏಳೂ ದಿನ ಜೊತೆಗಿರುತ್ತಿದ್ದೆವು. ಅವನು ಕೊಡುಗೈ ದಾನಿ. ಅವನ ಸ್ಮಾರಕ ಮಾಡುವ ಸೌಭಾಗ್ಯ ನನ್ನದು ಎಂದರು.
ರೇಸ್ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು ಇಡುವುದು ಸೂಕ್ತ ಎನಿಸುತ್ತದೆ ಎಂದು ಸಿಎಂ ಹೇಳಿದಾಗ ಕೆಲವು ಸಭಿಕರು ನಕ್ಕರು.ಅದಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ವನಗಬೇಡಿ, ಅಂಬರೀಷ್ ಬಗ್ಗೆ ಗೊತ್ತಿರುವವರು ಇದು ಸರಿಯಾದ ನಿರ್ಧಾರ ಎಂದು ಗುರುತಿಸುತ್ತಾರೆ. ಅವರು ಹೆಚ್ಚು ಸಮಯವನ್ನು ರೇಸ್ಕೋರ್ಸ್ನಲ್ಲಿ ಕಳೆಯುತ್ತಿದ್ದರು, ಅವರು ಕುದುರೆಗಳ ಮಾಲೀಕರೂ ಸಹ ಆಗಿದ್ದರು. ರೇಸ್ಕೋರ್ಸ್ ರಸ್ತೆಗೆ ಗಾಂಧಿ ನಗರವೂ ಹತ್ತಿರ ಇದೆ ಹಾಗಾಗಿ ಅದೇ ರಸ್ತೆಗೆ ಅಂಬರೀಷ್ ಹೆಸರಿಡುವುದು ಸೂಕ್ತ ಎಂದು ಬೊಮ್ಮಾಯಿ ಸ್ಪಷ್ಟನೆಯನ್ನೂ ಕೊಟ್ಟರು.
ಈ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್. ಅಶೋಕ್, ಸಂಸದ ತೇಜಸ್ವಿಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ ಗರುಡಾಚಾರ್, ಎಂ.ಕೃಷ್ಣಪ್ಪ, ನಟ ರಾಘವೇಂದ್ರ ರಾಜ್ಕುಮಾರ್, ಅಭಿಷೇಕ್ ಅಂಬರೀಶ್ ಹಾಗೂ ಮತ್ತಿತರ ಗಣ್ಯರು ಹಾಜರಿದ್ದರು.
ನಟ ಅಭಿಷೇಕ್ ಅಂಬರೀಷ್ ಮಾತನಾಡಿ ರಾಜ್ಯ ಸರ್ಕಾರದ ಸಮ್ಮುಖದಲ್ಲಿ ವಿಷ್ಣುವರ್ಧನ್ ಸ್ಮಾರಕ ಆಗಿದೆ. ಈಗ ಅಪ್ಪು ಹೆಸರನ್ನು ರಸ್ತೆಗೆ ಇಟ್ಟಿದ್ದಾರೆ. ನಮ್ಮ ಅಪ್ಪನ ಸ್ಮಾರಕವೂ ಮುಕ್ತಾಯ ಹಂತದಲ್ಲಿದ್ದು ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.