ಇದ್ಯಾಕೆ ಶಾಕ್ ಶಾಕ್ ಶಾಕ್ ಎನ್ನಬೇಡಿ. ಕಾಮಿಡಿ ಶಾಕ್ ಕೊಡುತ್ತಿದ್ದ ಶರಣ್, ಇದೀಗ ಎಲೆಕ್ಟ್ರಿಕ್ ಶಾಕ್ ಕೊಡೋಕೆ ಬರ್ತಿದ್ದಾರೆ. ಯೆಸ್, ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ ಸಿನಿಮಾ ಖ್ಯಾತಿಯ ಅರವಿಂದ್ ಕುಪ್ಲಿಕರ್ ಅವರ ಹೊಸ ಸಿನಿಮಾಗೆ ಶರಣ್ ಹೀರೋ. ಡಾರ್ಕ್ ಹ್ಯೂಮರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಶರಣ್ ಎಲೆಕ್ಟ್ರಿಷಿಯನ್ ಪಾತ್ರ ಮಾಡುತ್ತಿದ್ದಾರೆ. ಸಿಂಪಲ್ ಸುನಿ ಜೊತೆಯಲ್ಲಿ ಡಾರ್ಕ್ ಹಾರರ್ ಕಾಮಿಡಿ ಮೂಲಕ ಅವತಾರ ಪುರುಷನಾಗಿ ಗೆದ್ದಿದ್ದ ಶರಣ್, ನವನೀತ್ ಅವರ ಛೂ ಮಂತರ್ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಿದ್ದಾರೆ.
ಶರಣ್ ಅಭಿನಯದಲ್ಲಿ ಒಂದು ಹ್ಯೂಮರ್ ಟಚ್ ಇರುತ್ತದೆ. ಚಿತ್ರದಲ್ಲಿ ಹೀರೋ ಆದ್ರೂ, ಹಾಸ್ಯಕ್ಕೆ ಕೊರತೆ ಇರೋದಿಲ್ಲ.ಪಾತ್ರ ಹಿಂದಿನ ಸಿನಿಮಾಗಳಿಗಿಂತ ಡಿಫ್ರೆಂಟ್ ಆಗಿರಲಿದ್ದು, ಬಾಗಲಕೋಟೆಯ ಕಥೆ ಇದೆ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ. ಶ್ರೀಧರ ಕೃಪ ಕಂಬೈನ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದಾಗಿದ್ದು, ಬಿ.ಬಸವರಾಜ್ ಹಾಗೂ ಶ್ರೀಧರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ ‘ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ’ ಸಿನಿಮಾ ನಂತರ ಅರವಿಂದ್ ಕುಪ್ಲಿಕರ್ ಆಕ್ಷನ್ ಕಟ್ ಹೇಳುತ್ತಿರುವ ಎರಡನೇ ಸಿನಿಮಾವಿದು.
ಇನ್ನೂ ಹೆಸರಿಡದ ಈ ಚಿತ್ರ ನೈಜ ಘಟನೆಯ ಸುತ್ತ ಸುತ್ತುತ್ತದೆ. ಇದು ರಾಜಕೀಯ ವಿಡಂಬನೆಯಾಗಿದ್ದು, ಉತ್ತರ ಕರ್ನಾಟಕದ ಬಾಗಲಕೋಟೆಯ ಭೌಗೋಳಿಕತೆಯನ್ನು ಆಧರಿಸಿದ ಸಾಮಾಜಿಕ ಸಮಸ್ಯೆಯನ್ನು ಆಧರಿಸಿದೆ. ಚಿತ್ರದ ಕಥಾವಸ್ತುವು ಕೃಷ್ಣಾ ಮೇಲ್ದಂಡೆ ಯೋಜನೆಯ ಪರಿಣಾಮವಾಗಿ ಸುಮಾರು 20 ಹಳ್ಳಿಗಳು ಮುಳುಗಡೆ ಪ್ರದೇಶಕ್ಕೆ ಬಂದವು ಮತ್ತು ಕೃಷಿ ಭೂಮಿಯನ್ನು ಹೊಂದಿದ್ದ ಜನರ ಮೇಲೆ ಅದರ ಪ್ರಭಾವದ ಕುರಿತಾಗಿದೆ. ಇದು ನಮ್ಮ ಕಥಾಹಂದರದ ಕಾಲ್ಪನಿಕ ಹಿನ್ನೆಲೆಯಾಯಿತು ಎಂದು ಅರವಿಂದ್ ಹೇಳುತ್ತಾರೆ.
ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಆಯ್ಕೆಯಾಗಿದ್ದು, ಪತ್ರಕರ್ತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಅಚ್ಯುತ್ ಕುಮಾರ್, ರಂಗಾಯಣ ರಘು ಮತ್ತು ರಾಜು ತಾಳಿಕೋಟೆ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದಾರೆ. ಇದೇ ತಿಂಗಳ 20 ರಂದು ಚಿತ್ರೀಕರಣ ಆರಂಭಗೊಳ್ಳುತ್ತಿದೆ.