2022ರ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಶುಭ ಸುದ್ದಿ ಕೊಟ್ಟ ವೇದ 50ನೇ ದಿನದತ್ತ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಶಿವಣ್ಣ ಅಭಿನಯದ 125ನೇ ಸಿನಿಮಾ, ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ.. ಶಿವಣ್ಣ-ಹರ್ಷ ಕಾಂಬಿನೇಷನ್`ನ 4ನೇ ಸಿನಿಮಾ.. ಹೀಗೆ ಹಲವು ವಿಷೇಷತೆಗಳಿದ್ದ ವೇದವನ್ನು ಕನ್ನಡಿಗರು ಬಾಚಿ ತಬ್ಬಿಕೊಂಡರು. ಹೆಣ್ಣು ಮಕ್ಕಳಿಗೆ ಗೌರವಿಸಬೇಕು ಎಂಬ ಸಂದೇಶವಿದ್ದ ರಕ್ತಸಿಕ್ತ ಕಥೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಇದೀಗ ವೇದ ತೆಲುಗಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಹೊಸ ಟ್ರೆಂಡ್ ಸೃಷ್ಟಿಸುವ ಹಾದಿಯಲ್ಲಿದೆ. ಇದೀಗ ಮನೆ ಮನೆಗೆ ಬರುವ ದಿನಾಂಕ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.
ವೇದ ಚಿತ್ರವನ್ನು ಝೀ ಟಿವಿ ಖರೀದಿಸಿತ್ತು. ಝೀಟಿವಿ ಸಹಯೋಗದಲ್ಲಿಯೇ ನಿರ್ಮಾಣವಾಗಿದ್ದ ವೇದ ಜೀ5ನಲ್ಲಿ ಪ್ರಸಾರವಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 10ರಂದು ವೇದ ಪ್ರಸಾರವಾಗಲಿದೆ. ಶೀಘ್ರದಲ್ಲಿಯೇ ಅಧಿಕೃತವಾಗಿ ಇದನ್ನು ಅಧಿಕೃತವಾಗಿ ಘೋಷಿಸಲಾಗುವುದು.
ಅಲ್ಲಿಗೆ ಪ್ರೇಕ್ಷಕರು ಇಷ್ಟಪಟ್ಟಿದ್ದ ಗಿಲಕ್ಕೋ ಶಿವ ಗಿಲಕ್ಕೋ.. ಪುಷ್ಪ ಪುಷ್ಪ ಹಾಡನ್ನು ಅಭಿಮಾನಿಳು ಮನೆಯಲ್ಲಿಯೇ ಅಥವಾ ಮೊಬೈಲಿನಲ್ಲಿಯೇ ನೋಡಬಹುದು. ವೇದ ಶಿವಣ್ಣ ಅವರ 125ನೇ ಚಿತ್ರವಾದರೂ ಮಿಂಚಿದ್ದು ಆದಿತಿ ಸಾಗರ್. ಆ ಮೂಲಕ ಶಿವರಾಜ್ ಕುಮಾರ್ ಮತ್ತೊಮ್ಮೆ ಪ್ರೇಕ್ಷಕರ ಹೃದಯ ಕದ್ದಿದ್ದರು. ಆದಿತಿ ಸಾಗರ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಗೀತಾ ಪೊನ್ನಪ್ಪ, ಉಮಾಶ್ರೀ.. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಿಂಚಿದ್ದರು. ಇವೆಲ್ಲವುಗಳ ನಡುವೆ ಥಿಯೇಟರಿನಲ್ಲಿ ನೋಡಲು ಸಾಧ್ಯವಾಗದವರಿಗೆ ಈಗ ಮನೆಯಲ್ಲಿಯೇ ವೇದ ನೋಡುವ ಅವಕಾಶ ಬಂದಿದೆ.