ಶಿವರಾಜ್ ಕುಮಾರ್ ಅಭಿನಯದ ಶ್ರೀನಿ ನಿರ್ದೇಶನದ ಘೋಸ್ಟ್ ಚಿತ್ರದ ಗಾತ್ರ ಮತ್ತು ನಿರೀಕ್ಷೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಮಲಯಾಳಂನಿಂದ ಜಯರಾಮ್, ಹಿಂದಿಯಿಂದ ಅನುಪಮ್ ಖೇರ್, ಅರ್ಚನಾ ಜೋಯಿಸ್ ಜಾಯಿನ್ ಆದ ನಂತರ ತಂಡಕ್ಕೆ ವಿಜಯ್ ಸೇತುಪತಿ ಸೇರ್ಪಡೆಯಾಗಿರುವ ಸುದ್ದಿ ಬಂದಿದೆ. ಸುದ್ದಿ ಖಚಿತ ಎನ್ನಲಾಗದಿದ್ದರೂ ಶ್ರೀನಿಯವರೇ ರಿಲೀಸ್ ಮಾಡಿರುವ ಪುಟ್ಟ ವಿಡಿಯೊ ಸುತ್ತ ಇಷ್ಟೆಲ್ಲ ನಿರೀಕ್ಷೆಗಳೆದ್ದಿವೆ. ಆ ವಿಡಿಯೋದಲ್ಲಿ ಶ್ರೀನಿ ಮತ್ತು ಸಂದೇಶ್ ನಾಗರಾಜ್ ಜೊತೆ ವಿಜಯ್ ಸೇತುಪತಿ ಇದ್ದು, ಮುಂದೇನಾಯ್ತು ಅಂದ್ರೆ.. ಎಂಬ ಕ್ಯಾಪ್ಷನ್ ಕೊಟ್ಟು ಎಂದಿನಂತೆ ಹುಳ ಬಿಟ್ಟಿದ್ದಾರೆ ಶ್ರೀನಿ.
ಈಗಾಗಲೇ ಅರ್ಧಕ್ಕರ್ಧ ಚಿತ್ರೀಕರಣ ಮುಗಿಸಿರುವ ಘೋಸ್ಟ್ ಚಿತ್ರದ 2ನೇ ಹಂತದ ಚಿತ್ರೀಕರಣ ಫೆಬ್ರವರಿ 2ನೇ ವಾರದಿಂದ ಶುರುವಾಗುತ್ತಿದೆ. ವಿಜಯ್ ಸೇತುಪತಿ ಬರುತ್ತಿದ್ದಾರಂದ ಮೇಲೆ ಚಿತ್ರದ ಮೇಲಿನ ನಿರೀಕ್ಷೆಗಳು ಡಬಲ್..ತ್ರಿಬಲ್.. ಆಗುತ್ತವೆ. ಸಂದೇಶ್ ನಾಗರಾಜ್ ನಿರ್ಮಾಣದ ಘೋಸ್ಟ್ ಚಿತ್ರದಲ್ಲಿ ವಿಜಯ್ ಸೇತುಪತಿ ಅವರಿಗೆ ವರ್ಸಟೈಲ್ ಪಾತ್ರವಿದೆ ಎನ್ನಲಾಗಿದೆ. ಒಂದು ಕಡೆ ಶಿವಣ್ಣ ತಮಿಳಿನಲ್ಲಿ ರಜನಿಕಾಂತ್, ಧನುಷ್ ಜೊತೆ ಚಿತ್ರಗಳ ಮೂಲಕ ಎಂಟ್ರಿ ಕೊಡುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ಶಿವಣ್ಣನ ಚಿತ್ರಗಳಿಗೆ ಮಲಯಾಳಂ, ತಮಿಳು, ಹಿಂದಿಯ ಸ್ಟಾರ್ ನಟರು ಬರುತ್ತಿದ್ದಾರೆ, ಕೊಡು-ಕೊಳ್ಳುವಿಕೆ ಬಾಂಧವ್ಯ ಜೋರಾಗಿಯೇ ಸಾಗಿದೆ...