ಎಸ್.ನಾರಾಯಣ್ ಸುದೀರ್ಘ ಗ್ಯಾಪ್ ನಂತರ ಕಿರುತೆರೆಯಲ್ಲಿ ನಿರ್ದೇಶನಕ್ಕಿಳಿದಿರುವುದು ಹಾಗೂ ಆ ಧಾರಾವಾಹಿಯ ಕೇಂದ್ರ ಪಾತ್ರದಲ್ಲಿ ಅನಿರುದ್ಧ ನಟಿಸುತ್ತಿರುವುದು ಗೊತ್ತಿರುವುದೇ. ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದ ನಂತರ ಅನಿರುದ್ಧ ಜತ್ಕರ್ ಮತ್ತೊಮ್ಮೆ ಮೋಡಿ ಮಾಡೋಕೆ ರೆಡಿಯಾಗಿದ್ದಾರೆ. ಸೀರಿಯಲ್ ಹೆಸರು ಸೂರ್ಯವಂಶ.
ಸೂರ್ಯವಂಶ ಚಿತ್ರ ವಿಷ್ಣುವರ್ಧನ್ ವೃತ್ತಿಜೀವನದಲ್ಲಿ ಮೆಗಾಹಿಟ್ ಚಿತ್ರವಷ್ಟೇ ಅಲ್ಲ, ತಿರುವು ಕೊಟ್ಟ ಚಿತ್ರವೂ ಹೌದು. ಸೂರ್ಯವಂಶಕ್ಕೂ ಮೊದಲು ವೀರಪ್ಪನಾಯ್ಕ ಚಿತ್ರದ ಮೂಲಕ ಬ್ರೇಕ್ ಕೊಟ್ಟಿದ್ದ ಎಸ್.ನಾರಾಯಣ್, ವಿಷ್ಣುವರ್ಧನ್ ಕೆರಿಯರ್`ನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು. ಈಗ ಅದೇ ಎಸ್.ನಾರಾಯಣ್ ಮತ್ತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಸೂರ್ಯವಂಶ ಹೆಸರಿನ ಸೀರಿಯಲ್ಲಿನಲ್ಲಿ ಜೊತೆಗೂಡಿದ್ದಾರೆ.
ಅನಿರುದ್ಧ ಪಾತ್ರಕ್ಕೆ ಜೊತೆಯಾಗಿ ನಟಿಸುತ್ತಿರುವುದು ಪಲ್ಲವಿ ಗೌಡ. ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಪಲ್ಲವಿ ಗೌಡ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದವರು. ಈಗ ಕನ್ನಡ ಮಾತ್ರವಲ್ಲದೇ, ತೆಲುಗು, ಮಳಯಾಳಂನಲ್ಲೂ ನಟಿಸಿದ್ದು, ತ್ರಿಭಾಷಾ ನಟಿಯಾಗಿದ್ದಾರೆ. ಸದ್ಯ ತೆಲುಗು ಕಿರುತೆರೆಯಲ್ಲಿರುವ ಪಲ್ಲವಿ ಗೌಡ ಈಗ 'ಸೂರ್ಯವಂಶ' ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸೇವಂತಿ', 'ಜೋಡಿಹಕ್ಕಿ', 'ಪರಿಣಯ', 'ಸಾವಿತ್ರಿ', 'ಮನೆಯೊಂದು ಮೂರು ಬಾಗಿಲು' ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ತೆಲುಗಿನಲ್ಲಿ 'ಚಂದ್ರರಾಗಂ' ಎಂಬ ಧಾರಾವಾಹಿ ಮೂಲಕ ಹಿಟ್ ಆಗಿದ್ದರು. 2010 ರಿಂದ ಪಲ್ಲವಿ ಗೌಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಜೋಡಿಹಕ್ಕಿ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದ್ದ ಪಲ್ಲವಿ ಗೌಡ ಈ ಧಾರಾವಾಹಿಯಲ್ಲಿ ಅನಿರುದ್ಧಗೆ ನಾಯಕಿ. ಜೊತೆ ಜೊತೆಯಲಿ ಯಂತಹ ಹಿಟ್ ಕೊಟ್ಟಿದ್ದ ಅನಿರುದ್ಧ, ಕಿರುತೆರೆಯಲ್ಲಿ ಪಾರ್ವತಿ, ಭಾಗೀರಥಿ.. ಮೊದಲಾದ ಧಾರಾವಾಹಿಗಳ ಮೂಲಕ ಸಂಚಲನವನ್ನೇ ಹುಟ್ಟಿಸಿದ್ದ ಎಸ್.ನಾರಾಯಣ್, ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಸೂರ್ಯವಂಶ ಟೈಟಲ್.. ಹೀಗೆ ಎಲ್ಲವೂ ಹಿಟ್ ಕಾಂಬಿನೇಷನ್ ಜೊತೆಯಾಗಿವೆ. ಮೆಗಾ ಹಿಟ್`ಗೆ ವೇಯ್ಟಿಂಗ್.