` ಎಲ್ಲೂ ಹೋಗಲ್ಲ.. ರಕ್ಷಿತ್ ಶೆಟ್ಟಿ ಎಲ್ಲೂ ಹೋಗಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎಲ್ಲೂ ಹೋಗಲ್ಲ.. ರಕ್ಷಿತ್ ಶೆಟ್ಟಿ ಎಲ್ಲೂ ಹೋಗಲ್ಲ..!
ಎಲ್ಲೂ ಹೋಗಲ್ಲ.. ರಕ್ಷಿತ್ ಶೆಟ್ಟಿ ಎಲ್ಲೂ ಹೋಗಲ್ಲ..!

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಲ್ಲೂ ಹೋಗುತ್ತಿಲ್ಲ. ಅಂದ್ರೆ ಅವರು ಕನ್ನಡದಲ್ಲಿಯೇ ಇರಲಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಷ್ಟೇ ಸಿನಿಮಾ ಮಾಡ್ತಾರೆ. ತಮಿಳಿಗೂ ಹೋಗುತ್ತಿಲ್ಲ. ಇನ್ಯಾವ ಭಾಷೆಗೂ ಹೋಗುತ್ತಿಲ್ಲ. ಇದನ್ನು ಸ್ವತಃ ರಕ್ಷಿತ್ ಶೆಟ್ಟಿಯವರೇ ಖಚಿತ ಪಡಿಸಿದ್ದಾರೆ. 777 ಚಾರ್ಲಿ ಚಿತ್ರದ ಭರಪೂರ ಯಶಸ್ಸಿನ ನಂತರ ಸಹಜವಾಗಿಯೇ ರಕ್ಷಿತ್ ಶೆಟ್ಟಿಯವರಿಗೆ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಇದೀಗ ರಕ್ಷಿತ್ ಶೆಟ್ಟಿ ಅವೆಲ್ಲವನ್ನೂ ಸೈಡಿಗೆ ತಳ್ಳಿ ಇಲ್ಲೇ ಇರುವುದಾಗಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಸದ್ಯಕ್ಕೆ ಹೇಮಂತ್ ರಾವ್ ಜೊತೆ ಸಪ್ತಸಾರದಾಚೆ ಎಲ್ಲೋ ಚಿತ್ರ ಮಾಡುತ್ತಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ರಕ್ಷಿತ್ ಮತ್ತು ಹೇಮಂತ್ ರಾವ್ ಇಬ್ಬರೂ ಜೊತೆಯಾಗಿರುವ ಚಿತ್ರ ಅದು. ಆ ಚಿತ್ರಕ್ಕಾಗಿ ಚಿತ್ರದ ಪಾತ್ರಕ್ಕಾಗಿ ಈಗಾಗಲೇ ಡುಮ್ಮಣ್ಣನಾಗಿರುವ ರಕ್ಷಿತ್ ಶೆಟ್ಟಿ ಪಾತ್ರದೊಳಗೆ ಮುಳುಗಿದ್ದಾರೆ.

ಅದು ಮುಗಿಯುತ್ತಿದ್ದಂತೆಯೇ ಹೊಂಬಾಳೆಯವರಿಗೆ ಒಪ್ಪಿಕೊಂಡಿರುವ ರಿಚರ್ಡ್ ಆಂಟನಿ ಚಿತ್ರ ಶುರುವಾಗಬೇಕು. ಚಿತ್ರಕ್ಕೆ ರಕ್ಷಿತ್ ಶೆಟ್ಟಿಯವರದ್ದೇ ಡೈರೆಕ್ಷನ್ ಇರೋದ್ರಿಂದ ಕೆಲಸವೂ ಜಾಸ್ತಿ. ಸ್ಕ್ರಿಪ್ಟ್, ಪ್ರೀ ಪ್ರೊಡಕ್ಷನ್ ಕೆಲಸಗಳ ಜೊತೆಗೆ ನಟನೆಗೂ ತಯಾರಾಗಬೇಕು. ಉಳಿದವರು ಕಂಡಂತೆ ಚಿತ್ರದ ಪ್ರೀಕ್ವೆಲ್ ಎನ್ನಲಾಗುತ್ತಿದ್ದರೂ, ಗ್ಯಾರಂಟಿ ಏನೂ ಇಲ್ಲ.

ಇವುಗಳ ಜೊತೆಗೆ ಪುಣ್ಯಕೋಟಿ ಅನ್ನೋ ಚಿತ್ರವನ್ನು ರಕ್ಷಿತ್ ಶೆಟ್ಟಿ ಘೋಷಿಸಿದ್ದಾರೆ. ಅದನ್ನು ಎರಡು ಭಾಗಗಳಲ್ಲಿ ಮಾಡುವ ಪ್ಲಾನ್ ರಕ್ಷಿತ್ ಶೆಟ್ಟಿಯವರದ್ದು. ಅವರದ್ದೇ ಡೈರೆಕ್ಷನ್.  ಅದೆಲ್ಲದರ ಜೊತೆಗೆ ಮಿಡ್ ನೈಟ್ ಟು ಮೋಕ್ಷ ಎಂಬ ಚಿತ್ರ ಲಿಸ್ಟಿನಲ್ಲಿದೆ.

ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡಲು ರಕ್ಷಿತ್ ಶೆಟ್ಟಿ ಒಂದು ಟ್ವೀಟ್ ಮಾಡಿದ್ದರು. 'ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ನನ್ನ ಮುಂದಿನ ಸಿನಿಮಾಗಳು ಈ ರೀತಿ ಇವೆ. RA (ರಿಚರ್ಡ್ ಆಂಟನಿ), PK1 (ಪುಣ್ಯಕೋಟಿ 1), PK 2 (ಪುಣ್ಯಕೋಟಿ 2), ಮತ್ತು  M2M (Midnight to Moksha)  ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಿತ್ರಗಳು ಮಾತ್ರ. ಸದ್ಯ 'ಕಿರಿಕ್ ಪಾರ್ಟಿ 2' ಮಾಡುವ ಯಾವ ಆಲೋಚನೆಯೂ ಇಲ್ಲ. ಆದರೆ 'ಕಿರಿಕ್ ಪಾರ್ಟಿ 2' ಬಗ್ಗೆ ನನಗೆ ಬೇರೆಯದೇ ರೀತಿಯ ಪ್ಲ್ಯಾನ್ಗಳು ಇದೆ, ನೋಡೋಣ... ಇದಿಷ್ಟು ಹೊರತುಪಡಿಸಿ, ಸೋಶಿಯಲ್ ಮೀಡಿಯಾದಲ್ಲಿ ನೀವೇನೇ ಓದಿದ್ದರೂ ಅದೆಲ್ಲವೂ ಸುಳ್ಳು. ಅದೆಲ್ಲ ಯಾವತ್ತಿಗೂ ನಿಜವಾಗುವುದಿಲ್ಲ. Love you all ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಅಂದಹಾಗೆ ಇದಿಷ್ಟೂ ಕ್ಲಾರಿಫಿಕೇಷನ್ ನೀಡೋದಕ್ಕೆ ಕಾರಣ ವಿಕ್ರಂ ಚಿತ್ರದ ಡೈರೆಕ್ಟರ್ ಲೋಕೇಶ್ ಅವರ ಹೊಸ ಚಿತ್ರದಲ್ಲಿ ಕಮಲ್ ಹಾಸನ್, ವಿಜಯ್ ಜೊತೆ ರಕ್ಷಿತ್ ನಟಿಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಕಮಲ್ ಜೊತೆಗೆ ನಟಿಸುತ್ತಾರಂತೆ ಎಂಬ ಸುದ್ದಿಯೇ ಸೆನ್ಸೇಷನ್ ಸೃಷ್ಟಿಸಿತ್ತು. ಈ ಎಲ್ಲ ಸುದ್ದಿಗಳೂ ವದಂತಿಗಳಷ್ಟೇ ಎಂದು ಖಚಿತ ಪಡಿಸಿದ್ದಾರೆ ರಕ್ಷಿತ್ ಶೆಟ್ಟಿ.