ಮನ್ ದೀಪ್ ರಾಯ್. ಇವರು ನಟಿಸಿದ ಚಿತ್ರಗಳ ಸಂಖ್ಯೆ ಅವರೇ ಹೇಳಿಕೊಂಡಿದ್ದಂತೆ ಸಾವಿರಕ್ಕೂ ಹೆಚ್ಚು. ಬೆಂಗಳೂರಿನ ಕಾವಲ್ ಭೈರಸಂದ್ರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಾಗ ಅವರ ವಯಸ್ಸಿನ್ನೂ 73. ಆರೋಗ್ಯವಾಗಿಯೇ ಇದ್ದ ಮನ್ ದೀಪ್ ರಾಯ್ ಅವರಿಗೆ ಇದೇ ತಿಂಗಳು ಒಮ್ಮೆ ಹೃದಯಾಘಾತವಾಗಿತ್ತು. 9ನೇ ವಯಸ್ಸಿಗೆ ರಂಗಭೂಮಿ ಪ್ರವೇಶ ಮಾಡಿದ ರಾಯ್, ಶಂಕರ್ ನಾಗ್ ಗರಡಿಯ ಹುಡುಗ. ಅನಂತ್ ನಾಗ್ ಅವರೇ ಮನ್ ದೀಪ್ ರಾಯ್ ಶಂಕರನಂತೆಯೇ ಇವನೂ ನನಗೆ ಇನ್ನೊಬ್ಬ ತಮ್ಮ ಎನ್ನುತ್ತಿದ್ದರು.
ಡಾ.ರಾಜ್, ಶಂಕರ್, ಅನಂತ್, ವಿಷ್ಣು, ಅಂಬಿ, ಪ್ರಭಾಕರ್ ಅವರಿಂದ ಶುರುವಾದ ಜರ್ನಿ ಶಿವಣ್ಣ, ರವಿಚಂದ್ರನ್.. ನಂತರ ಈಗಿನ ಜನರೇಷನ್ ನಾಯಕರ ಜೊತೆಯಲ್ಲಿಯೂ ಮುಂದುವರೆದಿತ್ತು. ಮುಂಬಯಿನವರಾದ ಮನ್ ದೀಪ್ ರಾಯ್ ಅವರಿಗೆ ಕನ್ನಡ ಚೆನ್ನಾಗಿತ್ತಾದರೂ, ದೊಡ್ಡ ದೊಡ್ಡ ಪಾತ್ರಗಳು ಸಿಗಲಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ. ಆದರೆ ಸಿಕ್ಕ ಪಾತ್ರಗಳಲ್ಲಿಯೇ ಛಾಪು ಒತ್ತಿದ ಕಲಾವಿದ ರಾಯ್. ಚಿತ್ರರಂಗಕ್ಕೆ ಬರುವ ಮುನ್ನ ಐಬಿಎಂ, ಟಿಸಿಎಸ್`ಗಳಲ್ಲಿ ಕೆಲಸ ಮಾಡುತ್ತಿದ್ದರು. ಮಿಂಚಿನ ಓಡ ಅವರ ಮೊದಲ ಚಿತ್ರ.
ಆಕಸ್ಮಿಕ, ಅಂತಿಮ ಘಟ್ಟ, ಚಲಿಸುವ ಮೋಡಗಳು, ಅಪೂರ್ವ ಸಂಗಮ, ಅಯ್ಯ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತರಕ್ಷಕ, ಗಜಪತಿ ಗರ್ವಭಂಗ, ಪ್ರೀತ್ಸೋದ್ ತಪ್ಪಾ, ಏಳು ಸುತ್ತಿನ ಕೋಟೆ, ಬಾಡದ ಹೂವು, ರಾಜಕುಮಾರ.. ಹೀಗೆ ನಟಿಸಿದ್ದ ಚಿತ್ರಗಳು ಅಜರಾಮರ. ಪುಷ್ಪಕ ವಿಮಾನ ಚಿತ್ರ ಅವರಿಗೆ ಭಾರಿ ಹೆಸರು ತಂದುಕೊಟ್ಟ ಚಿತ್ರ. ಬೆಳದಿಂಗಳ ಬಾಲೆಯ ಆ ಮೂಗು.. ಆ ಮೂಗು.. ಡೈಲಾಗ್ ಕೇಳಿದವರ ತುಟಿ ಇವತ್ತಿಗೂ ಅರಳುತ್ತದೆ.
ಮುಂಬೈನಲ್ಲೇ ಹುಟ್ಟಿ ಬೆಳೆದಿದ್ದ ಮನ್ ದೀಪ್ ರಾಯ್ ಅವರಿಗೆ ಮಿಂಚಿನ ಓಟ ಚಿತ್ರ ಮಾಡಿದಾಗ ಕನ್ನಡ ಬರುತ್ತಿರಲಿಲ್ಲ. ಆದರೆ ಆಮೇಲೆ ಕನ್ನಡವನ್ನು ಇಷ್ಟಪಟ್ಟು ಕಲಿತ ರಾಯ್ ಕನ್ನಡವನ್ನು ಅನ್ನದ ಭಾಷೆಯಾಗಿಸಿಕೊಂರು. ಮುಮ್ಮೂಟಿ, ಮೋಹನ್ ಲಾಲ್ ಮಲಯಾಳಂನಲ್ಲಿಯೂ ನಟಿಸಿದ್ದ ಮನ್ ದೀಪ್ ರಾಯ್, ಕಿರುತೆರೆಯ ಧಾರಾವಾಹಿಗಳು ಹೆಜ್ಜೆ ಗುರುತು ಮೂಡಿಸಿದರು. ಅವರಿಗೆ ಒಬ್ಬಳೇ ಮಗಳು. ಆಕ್ಷತಾ ರಾಯ್.