` ಪದ್ಮಭೂಷಣ ಎಸ್.ಎಲ್.ಬೈರಪ್ಪ ಮತ್ತು ಚಿತ್ರರಂಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪದ್ಮಭೂಷಣ ಎಸ್.ಎಲ್.ಬೈರಪ್ಪ ಮತ್ತು ಚಿತ್ರರಂಗ
SL Byrappa Image

ಎಸ್.ಎಲ್.ಬೈರಪ್ಪ. ಕನ್ನಡ ಸಾಹಿತ್ಯ ಲೋಕದ ದೊಡ್ಡ ಹೆಸರು. 91 ವರ್ಷದ ಬೈರಪ್ಪ ಅವರ ಕೃತಿಯೊಂದು ಪ್ರಕಟವಾದರೆ ಓದುಗರು ಮುಗಿಬಿದ್ದು ಖರೀದಿಸುತ್ತಾರೆ. ಹಾಸನದ ಸಂತೇಶಿವರ ಗ್ರಾಮದ ಬೈರಪ್ಪ ಈಗ ವಾಸವಿರೋದು ಮೈಸೂರಿನಲ್ಲಿ. ಮೊದಲಿನಿಂದಲೂ ಎಡಪಂಥೀಯ ವರ್ಗದ ಸಾಹಿತಿಗಳ ವಿರೋಧವಾಗಿಯೇ ಇದ್ದ ಬೈರಪ್ಪ, ಅವತ್ತಿಗೂ ಇವತ್ತಿಗೂ ತಮಗೆ ಅನ್ನಿಸಿದ್ದನ್ನು ಹೇಳದೇ ಬಿಟ್ಟವರಲ್ಲ. ಆಳವಾದ ಅಧ್ಯಯನ ಬೈರಪ್ಪನವರ ಶಕ್ತಿಯೂ ಹೌದು. ಅಂತಹ ಬೈರಪ್ಪನವರಿಗೀಗ ಪದ್ಮಭೂಷಣ ಪುರಸ್ಕಾರ ಸಿಕ್ಕಿದೆ. 2016ರಲ್ಲಿ ಬೈರಪ್ಪನವರಿಗೆ ಪದ್ಮಶ್ರೀ ಗೌರವ ಸಿಕ್ಕಿತ್ತು. 6 ವರ್ಷಗಳ ನಂತರ ಪದ್ಮಭೂಷಣ ಗೌರವ ಒಲಿದುಬಂದಿದೆ.

ಪರ್ವ, ದಾಟು, ಮಂದ್ರ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಗ್ರಹಣ, ಆವರಣ, ಮತದಾನ, ನಾಯಿನೆರಳು, ಗೃಹಭಂಗ, ಸಾಕ್ಷಿ, ತಂತು, ಸಾರ್ಥ, ಕವಲು, ಉತ್ತರಕಾಂಡ, ಧರ್ಮಶ್ರೀ, ದೂರ ಸರಿದರು, ನಿರಾಕರಣ, ಅನ್ವೇಷಣ, ನೆಲೆ.. ಹೀಗೆ ಅವರ ಪ್ರತಿಯೊಂದು ಕೃತಿಗಳೂ ಹಲವು ಮುದ್ರಣ ಕಂಡಿವೆ. ಕನ್ನಡದಲ್ಲಷ್ಟೇ ಅಲ್ಲ, ಇಂಗ್ಲಿಷ್, ಮರಾಠಿ, ಸಂಸ್ಕøತ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಸಿನಿಮಾಗಳೂ ಆಗಿವೆ.

ಬೈರಪ್ಪನವರ 4 ಕಾದಂಬರಿಗಳು ಸಿನಿಮಾಗಳಾಗಿವೆ. 1972ರಲ್ಲಿ ವಂಶವೃಕ್ಷ, 1977ರಲ್ಲಿ ತಬ್ಬಲಿಯೂ ನೀನಾದೆ ಮಗನೆ ಚಿತ್ರಗಳು ಬಿಡಗಡೆಯಾಗಿದ್ದವು. ಎರಡೂ ಚಿತ್ರಗಳಿಗೆ ನಿರ್ದೇಶಕರಾಗಿದ್ದವರು ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ್. ವಿಷ್ಣುವರ್ಧನ್ ಒಬ್ಬ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು ವಂಶವೃಕ್ಷ ಚಿತ್ರದಲ್ಲಿಯೇ. ಅದಾದ ನಂತರ 2001ರಲ್ಲಿ ಮತದಾನ ಚಿತ್ರ ತೆರೆಗೆ ಬಂದಿತ್ತು. ನಿರ್ದೇಶನ ಮಾಡಿದ್ದವರು ಟಿ.ಎನ್.ಸೀತಾರಾಂ. ಅದಾದ ಮೇಲೆ ನಾಯಿನೆರಳು ಚಿತ್ರವನ್ನು ನಿರ್ದೇಶಕ ಗಿರೀಶ್ ಕಾರ್ನಾಡ್2006ರಲ್ಲಿ ತೆರೆಗೆ ತಂದಿದ್ದರು.

ಅಷ್ಟೇ ಅಲ್ಲದೆ ಗೃಹಭಂಗ ಕನ್ನಡದಲ್ಲಿ ಹಾಗೂ ದಾಟು ಹಿಂದಿಯಲ್ಲಿ ಧಾರಾವಾಹಿಗಳಾಗಿ ಯಶಸ್ಸು ಕಂಡಿವೆ. ಇನ್ನೂ ಹಲವು ಕಾದಂಬರಿಗಳನ್ನು ಸಿನಿಮಾ ಮಾಡುವ ಕನಸು ಹೊತ್ತಿದ್ದವರಿಗೆ ಬೈರಪ್ಪ ಅನುಮತಿ ನೀಡಿಲ್ಲ.