ಹುಡುಗೀರು ಕೇಳ್ದಾಗೆಲ್ಲ ರಾಖಿ ಕಟ್ಟೋಕೆ ಕೈ ಕೊಡ್ತೀವಿ. ನಾವು ಕೇಳ್ದಾಗ ತಾಳಿ ಕಟ್ಟೋಕೆ ಯಾಕೆ ಕೊರಳು ಕೊಡಲ್ಲ..
ಡೈಲಾಗು ಕೇಳಿ ನಗುವುದಕ್ಕೆ ಪುರುಸೊತ್ತು ಕೊಡಲ್ಲ. ಅವು ಕಣ್ಣುಗಳೋ.. ಕೆಂಡದುಂಡೆಗಳೋ.. ಎನ್ನುವಂತೆ ದೆವ್ವವಾಗಿ ಅವಳು ಕಾಣಿಸುತ್ತಾಳೆ. ಸಾಯಿ ಕುಮಾರ್ ಅಗ್ನಿ ಸ್ಟೈಲಿನಲ್ಲೇ ಡೈಲಾಗ್ ಹೊಡೆದರೆ, ಶೋಭರಾಜ್, ಶಂಕರ್ ಅಶ್ವತ್ಥ್, ಓಂಸಾಯಿಪ್ರಕಾಶ್, ಕುರಿ ಪ್ರತಾಪ್..ಎಲ್ಲರೂ ಭಯಂಕರವಾಗಿಯೇ ನಟಿಸುತ್ತಾರೆ. ಇವರ ಮಧ್ಯೆ ಸುಶ್ಮಿತಾ ಜೋಶಿ ಮತ್ತು ನಿಹಾರಿಕ ಶೆಣೈ ನಾಯಕಿಯರು ಮುದ್ದಾಗಿ ಹಾಗೂ ಭಯಂಕರವಾಗಿ ಕಾಣಿಸುತ್ತಾರೆ. ಚಿತ್ರಕ್ಕೆ ಪ್ರಥಮ್ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ. ಚಿತ್ರದ ಕಥೆಯೊಳಗೂ ಡೈರೆಕ್ಟರ್. ಹೆಸರು ನಟ ಭಯಂಕರ. ರಿಲೀಸ್ ಆಗುತ್ತಿರುವುದು ಫೆಬ್ರವರಿ 3ನೇ ತಾರೀಕಿಗೆ.
ಸ್ವರಸ್ಯ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರೋ ಚಿತ್ರದಲ್ಲಿ ಉಪೇಂದ್ರ ಹಾಡಿದೆ. ಧ್ರುವ ಸರ್ಜಾ ವಾಯ್ಸ್ ಇದೆ. ಕಲ್ಲನ್ನೂ ಮಾತನಾಡಿಸುವ ಕಲೆ ಹೊಂದಿರೋ ಪ್ರಥಮ್, ಈ ಹೊತ್ತಿನಲ್ಲಿ ಸಿದ್ದರಾಮಯ್ಯ ಅವರಿಂದ ಚಿತ್ರಕ್ಕೆ ಶುಭಾಶಯ ಹೇಳಿಸಿರುವುದು ವಿಶೇಷ. ದಟ್ ಈಸ್ ಪ್ರಥಮ್ ಸ್ಪೆಷಲ್. ನಟಭಯಂಕರ ಎಂದರೆ ನೆನಪಾಗುವುದು ವಜ್ರಮುನಿ. ಆದರೆ ಇಲ್ಲಿ ಪ್ರಥಮ್ ಹೀರೋ ಮತ್ತು ಡೈರೆಕ್ಟರ್. ಇದು ಹಾರರ್ ಆಕ್ಷನ್ ಕಾಮಿಡಿ ಸಿನಿಮಾ.