ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್, ಪುನೀತ್ ರಾಜಕುಮಾರ್, ರವಿಚಂದ್ರನ್, ಶಿವಣ್ಣ, ಉಪೇಂದ್ರ, ಸುದೀಪ್, ಧ್ರುವ ಸರ್ಜಾ, ಯಶ್.. ಹೀಗೆ ಎಲ್ಲರದ್ದೂ ಒಂದೊಂದು ಡೈಲಾಗ್.. ಮರೆಯಲಾಗದ ಮಾತುಗಳ ಝಲಕ್ಕಿನ ಜೊತೆಯಲ್ಲೇ ಕುಣಿಯತ್ತಾನೆ ಉಪಾಧ್ಯಕ್ಷ. ಡಾ.ರಾಜ್ ಅವರ ಸ್ಮರಣೆಯೊಂದಿಗೆ ಶುರುವಾಗುವ ಹಾಡು ಯಶ್ ಅವರ ದಿಸ್ ಈಸ್ ಜಸ್ಟ್ ಬಿಗಿನಿಂಗ್ ಎಂಬ ಡೈಲಾಗ್ ಜೊತೆ ಮುಗಿಯುತ್ತದೆ.
ಇದು ಉಪಾಧ್ಯಕ್ಷ ಚಿತ್ರದ ಟೈಟಲ್ ಟ್ರಾಕ್. ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದ ಪ್ರಕಾರವೇ ಎಲ್ಲವೂ ನಡೆದಿದ್ದರೆ ಪುನೀತ್ ರಾಜ್`ಕುಮಾರ್ ಹಾಡು ಹಾಡಬೇಕಿತ್ತು. ಅವರು ಓಕೆ ಎಂದೂ ಇದ್ದರು. ಅಧ್ಯಕ್ಷ ಟೈಟಲ್ ಟ್ರಾಕ್ ಪುನೀತ್ ಅವರ ಧ್ವನಿಯಲ್ಲೇ ಹಿಟ್ ಆಗಿದ್ದ ಕಾರಣ ಚಿತ್ರತಂಡವೂ ಅದನ್ನೇ ಪ್ಲಾನ್ ಮಾಡಿತ್ತು. ಈಗ ಈ ಉಪಾಧ್ಯಕ್ಷ ಟೈಟಲ್ ಟ್ರಾಕ್`ನ್ನು ವ್ಯಾಸರಾಜ್ ಸೋಸಲೆ ಅವರು ಹಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ಕಿಗೆ ಸಾಹಿತ್ ನೀಡಿರುವುದು ಭರ್ಜರಿ ಚೇತನ್.
ಚಿತ್ರದಲ್ಲಿ ಚಿಕ್ಕಣ್ಣ ಸೋಲೋ ಹೀರೋ ಆಗಿ ನಟಿಸಿದ್ದಾರೆ. ಹಾಗಂತ ಬಿಲ್ಡಪ್ ಎಲ್ಲ ಇಲ್ಲ. ಖುದ್ದು ಯಶ್ ಅವರೂ ಕಥೆಯನ್ನೊಮ್ಮೆ ನೋಡಿ ಯೆಸ್ ಎಂದಿದ್ದಾರಂತೆ. ನಿರ್ದೇಶಕ ಅನಿಲ್ ಕುಮಾರ್ ಅವರ ಕಥೆಯಲ್ಲಿ ಕಾಮಿಡಿ ಪಕ್ಕಾ. ಉಮಾಪತಿ ಶ್ರೀನಿವಾಸ್, ಸ್ಮಿತಾ ಉಮಾಪತಿ ನಿರ್ಮಾಣದ ಚಿತ್ರವಿದು. ಚಿಕ್ಕಣ್ಣ ಎದುರು ಮಲೈಕಾ ವಸುಪಾಲ್ ನಾಯಕಿಯಾಗಿದ್ದಾರೆ.