ಬಳ್ಳಾರಿಯಲ್ಲಿ ಪುನೀತ್ ರಾಜಕುಮಾರ್ ಅವರ ವಿಶೇಷ ಪ್ರತಿಮೆ, ರಾಜ್ಯದಲ್ಲೇ ಅತಿ ದೊಡ್ಡ ಪುನೀತ್ ರಾಜಕುಮಾರ್ ಪ್ರತಿಮೆ ಅನಾವರಣಗೊಂಡಿದೆ. ಭೌತಿಕವಾಗಿ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಇವತ್ತಿಗೂ ಜೀವಂತವಾಗಿರುವ ಡಾ.ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ಬಳ್ಳಾರಿಯಲ್ಲಿ ಡಾ.ರಾಜ್ ಕುಟುಂಬ ಸದಸ್ಯರು ಉದ್ಘಾಟನೆ ಮಾಡಿದರು. ಅಶ್ವಿನಿ ಪುನೀತ್ ರಾಜಕುಮಾರ್ ಭಾವುಕರಾಗಿದ್ದರೆ, ರಾಘವೇಂದ್ರ ರಾಜಕುಮಾರ್ ಸ್ಥಿತಪ್ರಜ್ಞರಾಗಿದ್ದರು. ಬಳ್ಳಾರಿ ಉತ್ಸವದಲ್ಲಿ ಅನಾವರಣ ಮಾಡುವುದಕ್ಕಾಗಿಯೇ ಸಿದ್ಧವಾಗಿದ್ದ ಬೃಹತ್ ಪ್ರತಿಮೆ ಇದು.
ಅಪ್ಪು ಪ್ರತಿಮೆಯ ವಿಶೇಷಗಳು ಒಂದೆರಡಲ್ಲ. ಪ್ರತಿಮೆಯ ಎತ್ತರ 23 ಅಡಿ. ಕಬ್ಬಿಣ ಮತ್ತು ಫೈಬರ್ ಬಳಸಿ ನಿರ್ಮಾಣ ಮಾಡಲಾಗಿದ್ದು ಪ್ರತಿಮೆಯ ಒಟ್ಟು ತೂಕ 3000 ಕೆಜಿ. 1 ಸಾವಿರ ಕೆಜಿ ಕಬ್ಬಿಣವೇ ಇದೆ. ಜಿಲ್ಲಾ ಕ್ರೀಡಾಂಗಣದ ಎದುರು ತಲೆಯೆತ್ತಲಿರುವ ಈ ಪ್ರತಿಮೆಗೆ ಉಕ್ಕಿನ ಜೊತೆ ಸ್ವಲ್ಪ ಫೈಬರ್ ಮಿಶ್ರಣ ಮಾಡಲಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಮಾಡಿರುವ ವೆಚ್ಚ 22 ಲಕ್ಷ.
ಪ್ರತಿಮೆ ನಿರ್ಮಾಣ ಮಾಡಿರುವುದು ಶಿವಮೊಗ್ಗ ಜಿಲ್ಲೆಯ ನಿಧಿಗೆ ಗ್ರಾಮದ ಹಿಂದೂ ಮಹಾಸಭಾದ ಬೃಹತ್ ಗಣಪತಿ ಪ್ರತಿಮೆ ಮಾಡುವ ಶಿಲ್ಪಿ ಜೀವನ್ ಅವರ ನೇತೃತ್ವದ ತಂಡ. ಜೀವನ್ ಹಾಗೂ 15 ಶಿಲ್ಪಿಗಳ ತಂಡ ಇದಕ್ಕಾಗಿ ಇಡೀ ತಂಡ 3 ತಿಂಗಳು ಶ್ರಮ ವಹಿಸಿದೆ. ರಾಜ್ಯದ ಹಲವೆಡೆ ಬೃಹತ್ ಗಣಪತಿ ಪ್ರತಿಮೆ ನಿರ್ಮಾಣ ಮಾಡಿರುವ ಖ್ಯಾತಿಯೂ ಈ ತಂಡಕ್ಕೆ ಇದೆ. ಕೆಜಿಎಫ್ ಸಿನಿಮಾದಲ್ಲಿ ಬಳಸಲಾಗಿರುವ ಯಶ್ ಅವರ ಪ್ರತಿಮೆಯ ಸೃಷ್ಟಿಕರ್ತರೂ ಇವರೇ.
ಈ ಪ್ರತಿಮೆಯನ್ನು ಶಿವಮೊಗ್ಗದಿಂದ ಬಳ್ಳಾರಿಗೆ ತರುವುದಕ್ಕೆ 40 ಅಡಿ ಉದ್ದದ 18 ಚಕ್ರದ ಉದ್ದನೆಯ ಟ್ರಕ್ ಬಳಸಲಾಗಿದೆ.
ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಕೂಡಾ ರಾಜ್ ಕುಟುಂಬದ ಜೊತೆ ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾದರು.