ಒಂದೆಡೆ ರಾಜಕೀಯ ಮತ್ತೊಂದೆಡೆ ಸಿನಿಮಾ, ಎರಡನ್ನೂ ನಿಭಾಯಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ. ಲಹರಿ ಜಿ. ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಮತ್ತೊಮ್ಮೆ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರವಿದು. ಮನೋಹರ್ ಎಂಬುವವರು ಚಿತ್ರದ ಡೈರೆಕ್ಟರ್. ಯುಐ ಚಿತ್ರಕ್ಕೂ ಇದೇ ಮನೋಹರನ್ ಮತ್ತು ಶ್ರೀಕಾಂತ್ ಜೋಡಿ. ಮತ್ತೊಮ್ಮೆ ಇದೇ ಜೋಡಿ ನಿಖಿಲ್ ಅವರಿಗಾಗಿ ಚಿತ್ರ ನಿರ್ಮಾಣ ಮಾಡುತ್ತಿದೆ.
ನಿಖಿಲ್ ಹುಟ್ಟುಹಬ್ಬಕ್ಕೆ ಮುನ್ನ ಶ್ರೀಕಾಂತ್ ಒಂದು ಟ್ವೀಟ್ ಮಾಡಿದ್ದರು. ಹೊಸ ಸೆನ್ಸೇಷನ್ ಘೋಷಿಸುವ ಸುಳಿವು ಕೊಟ್ಟಿದ್ದರು. ಆ ಟ್ವೀಟ್‍ನಲ್ಲಿ ಶಿವನಂದಿ ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದರು. ಅದೇ ಚಿತ್ರದ ಟೈಟಲ್ ಇರಬೇಕು ಎನ್ನುವುದು ಅಭಿಮಾನಿಗಳ ಊಹೆ. ಆರಂಭದಲ್ಲಿ ಆ ಟೈಟಲ್`ಗೆ ಶಿವಣ್ಣ ಮತ್ತು ಸುದೀಪ್ ಅವರನ್ನು ಊಹಿಸಿಕೊಂಡ ಅಭಿಮಾನಿಗಳ ಲೆಕ್ಕಾಚಾರ ಉಲ್ಟಾ ಆಗಿದೆ.
ಡೈರೆಕ್ಟರ್ ಮನೋಹರ ಚೇತನ್ ಕುಮಾರ್ ಅವರ ಬಳಿ ಅಸಿಸ್ಟೆಂಟ್ ಆಗಿದ್ದವರು. ನಿಖಿಲ್ ಪೋಸ್ಟರ್ ನೋಡಿದವರಿಗೆ ಇದು ಕ್ರೀಡೆ ಆಧರಿಸಿದ ಸಿನಿಮಾ ಎನ್ನಿಸಬಹುದು. ಆದರೆ ಇದು ಸ್ಪೋಟ್ರ್ಸ್ ಸಿನಿಮಾ ಅಲ್ಲವಂತೆ. ಆಕ್ಷನ್ ಡ್ರಾಮಾ ಎನ್ನುತ್ತಾರೆ ಮನೋಹರ.
ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದಿದ್ದಾರೆ ಮನೋಹರ. ಆದರೆ ರಾಮನಗರ ಕ್ಷೇತ್ರಕ್ಕೆ ನಿಖಿಲ್ ಅಭ್ಯರ್ಥಿ. ಸದ್ಯಕ್ಕೆ ಎಂದರೆ ಎಲೆಕ್ಷನ್ ಮುಗಿದ ಮೇಲೆಯೇ ಹೊಸ ಚಿತ್ರದ ಚಿತ್ರೀಕರಣ ಶುರುವಾಗಲಿದೆ.