ಸಿಂಪಲ್ ಸುನಿ ಮತ್ತು ವಿನಯ್ ರಾಜಕುಮಾರ್ ಇದೇ ಮೊದಲ ಬಾರಿ ಜೊತೆಯಾಗಿರುವ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಕನ್ನಡತಿ ಎನ್ನುವುದು ವಿಶೇಷವೇನಲ್ಲ. ಏಕೆಂದರೆ ಎಂದಿನಂತೆ ಸುನಿ ಕನ್ನಡದ ಹುಡುಗಿಯನ್ನೇ ಹುಡುಕಿದ್ದಾರೆ. ಆದರೆ ಈಕೆ ಸುನಿ ಕಣ್ಣಿಗೆ ಬಿದ್ದಿದ್ದು ಮಾತ್ರ ತಮಿಳು ಚಿತ್ರದಿಂದ ಎನ್ನುವುದು ವಿಶೇಷ. ಚಿತ್ರಕ್ಕೆ ಆಯ್ಕೆಯಾಗಿರುವುದು ಸ್ವಸ್ತಿಷ್ಠ.
ನಾನು ಸಹಜವಾಗಿಯೇ ಕನ್ನಡದ ಹುಡುಗಿಯರನ್ನು ಹುಡುಕಿ ಆರಿಸುತ್ತೇನೆ. ಈ ಚಿತ್ರಕ್ಕೂ ನಮ್ಮ ಹುಡುಗಿಯೇ ಬೇಕು ಎಂದು ಹುಡುಕುತ್ತಿದ್ದಾಗ ವಿಕ್ರಂ ಚಿತ್ರ ನೋಡಿದೆ. ಆ ಚಿತ್ರದಲ್ಲಿ ನಟಿಸಿರುವ ಸ್ವಸ್ತಿಷ್ಠ ನನ್ನ ಚಿತ್ರದ ಪಾತ್ರಕ್ಕೆ ಸೂಟ್ ಆಗುತ್ತಾರೆ ಎನಿಸಿತು. ಆಕೆಯ ವಿವರ ಜಾಲಾಡಿದಾಗ ಇನ್ನೂ ಖುಷಿಯಾಯಿತು. ಆಕೆ ಕನ್ನಡದ ಹುಡುಗಿ. ಉತ್ತರ ಕರ್ನಾಟಕವರು. ಪೂರ್ತಿ ಹೆಸರು ಸ್ವಸ್ತಿಷ್ಠ ಕೃಷ್ಣನ್. ಸದ್ಯಕ್ಕೆ ಚೆನ್ನೈ ನಿವಾಸಿ.
ನಾನು ಕನ್ನಡದವರಾದರೂ ಅವಕಾಶ ಸಿಕ್ಕಿದ್ದು ಇಲ್ಲಿ. ಕೆಲಸ ಸಿಕ್ಕಿದ್ದೂ ಇಲ್ಲಿ. ಈ ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ವಿನಯ್ ರಾಜಕುಮಾರ್ ಎದುರು ಸುನಿ ಅವರ ಡೈರೆಕ್ಷನ್. ಎಕ್ಸೈಟ್ ಅಂತೂ ಇದೆ. ಕನ್ನಡದ ಯಾರಾದರೂ ಸರಿ, ರಾಜ್ ಕುಟುಂಬದವರ ಚಿತ್ರದಲ್ಲಿ ನಟಿಸೋದನ್ನು ಇಷ್ಟ ಪಡ್ತಾರೆ. ನಾನೂ ಕನ್ನಡದವಳೇ ಅಲ್ವಾ.. ಎನ್ನುತ್ತಾರೆ ಸ್ವಸ್ತಿಷ್ಠ.
ವಿಕ್ರಂ ಚಿತ್ರದಲ್ಲಿ ಸ್ವಸ್ತಿಷ್ಟ ಮಾಡಿದ್ದುದು ಪುಟ್ಟ ಪಾತ್ರ. ಕಮಲ್ ಹಾಸನ್ ಮಗ ಪ್ರಭಂಜನ್ ಇರುತ್ತಾನಲ್ಲ, ಆತನ ಪತ್ನಿಯ ಪಾತ್ರ. ನಿಮಿಷಗಳಷ್ಟೇ ತೆರೆಯ ಮೇಲಿದ್ದರೂ ಸ್ವಸ್ತಿಷ್ಟ ಗಮನ ಸೆಳೆದಿದ್ದರು.