ಹುಟ್ಟುಹಬ್ಬವನ್ನು ತಂದೆ ತಾಯಿಯ ಸಮಾಧಿಯೆದರು ಆಚರಿಸಿದ ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ವಿಶೇಷಗಳ ಸರಮಾಲೆಯನ್ನೇ ಕೊಟ್ಟರು. 38ನೇ ಚಿತ್ರದ ಪೋಸ್ಟರ್ ಜೊತೆಯಲ್ಲೇ ಭೀಮ ಚಿತ್ರದ ಟೀಸರ್ ಕೂಡಾ ಬಿಟ್ಟರು. ಮುಂದುವರಿದ ಭಾಗವಾಗಿ ಅಭಿಮಾನಿಗಳಿಗೆ ಬಿರಿಯಾನಿ ಊಟ ಹಾಕಿಸುವ ಮೂಲಕ ದೊಡ್ಮನೆ ಹಾದಿ ತುಳಿದಿದ್ದಾರೆ.
ಆನೇಕಲ್`ನ ಕುಂಭಾರಹಳ್ಳಿಯಲ್ಲಿ ದೊಡ್ಡ ಪೆಂಡಾಲ್ ಹಾಕಿಸಿದ್ದ ವಿಜಯ್, ಅಭಿಮಾನಿಗಳಿಗಾಗಿ ಅಲ್ಲಿಯೇ ಬಾಡೂಟದ ವ್ಯವಸ್ಥೆ ಮಾಡಿಸಿದ್ದರು. ಸಾವಿರಾರು ಅಭಿಮಾನಿಗಳಿಗೆ ಊಟ ಹಾಕಿಸಿ, ಕೈತುತ್ತು ತಿನ್ನಿಸಿದರು.. ಅಭಿಮಾನಿಗಳು ಏನೂ ಕಡಿಮೆಯಿರಲಿಲ್ಲ. ನೆಚ್ಚಿನ ನಟನಿಗೆ ಕೇಕು, ಹಾರಗಳ ಸರಮಾಲೆಯನ್ನೇ ತಂದಿದ್ದರು. ಅಭಿಮಾನಿಯೊಬ್ಬ ಪಾದಯಾತ್ರೆಯಲ್ಲಿ ಬಂದಿದ್ದಕ್ಕೆ ಆಕ್ಷೇಪಿಸಿದ ವಿಜಯ್, ನನಗಾಗಿ ಪಾದಯಾತ್ರೆ ಮಾಡಬೇಡ. ಬದಲಿಗೆ ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿ ಪಾದಯಾತ್ರೆಗೆ ಹೋಗುವಂತೆ ಸಲಹೆ ನೀಡಿದರು. ಅಭಿಮಾನಿಯ ಪಾದ ಮುಟ್ಟಿ ನಮಸ್ಕರಿಸಿದರು.
ಸಾವಿರಾರು ಅಭಿಮಾನಿಗಳಿಗೆ ಚಿಕನ್ ಬಿರಿಯಾನಿ, ಚಿಕನ್ ಚಾಪ್ಸ್, ಅನ್ನ, ರಸಂ ಮಾಡಿಸಿದ್ದ ವಿಜಯ್, ದಿನವಿಡೀ ಅಭಿಮಾನಿಗಳ ಜೊತೆಯಿದ್ದು ಅಭಿಮಾನದ ಊಟ ಸವಿದರು.