ಇತ್ತೀಚೆಗೆ ನಟಿ ಪ್ರೇಮಾ ಮಂಗಳೂರಿಗೆ ಭೇಟಿ ನೀಡಿ ಕೊರಗಜ್ಜನಿಜಗೆ ಪೂಜೆ ಸಲ್ಲಿಸಿದ್ದರು. ಮೂಲತಃ ಕೊಡಗಿನವರಾದ ಪ್ರೇಮಾ ದೈವಗಳನ್ನು ಮೊದಲಿನಿಂದಲೂ ನಂಬುತ್ತಾರೆ. ಆದರೆ ಕೊರಗಜ್ಜನ ದೇವಸ್ಥಾನಕ್ಕೆ ಬಂದಿದ್ದು ಇದೇ ಮೊದಲಂತೆ. ಪ್ರೇಮಾ ಕೊರಗಜ್ಜನ ಪೂಜೆ ಮಾಡಿ ಹೋದ ನಂತರ ಏಕೆ ಬಂದಿದ್ದರು ಎಂಬ ವಿಷಯ ಬಹಿರಂಗವಾಗಿದೆ. ಕಾಪುವಿನ ಹೊಸ ಮಾರಿಗುಡಿ ಹಾಗೂ ಕಾರಣಿಕದ ಕೊರಗಜ್ಜ ದೇವಸ್ಥಾನಕ್ಕೆ ಬಂದಿದ್ದ ಪ್ರೇಮಾ ವಿಶೇಷವಾಗಿ ಕಂಕಣ ಭಾಗ್ಯದ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಟಿ ಪ್ರೇಮಾ ಒಬ್ಬ ಹುಡುಗನನ್ನು ನೋಡಿದ್ದು ಆ ಹುಡುಗನ ಜೊತೆಯಲ್ಲೇ ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಬೇಡಿಕೆ ಇಟ್ಟಿದ್ದಾರೆ. ಕಂಕಣ ಭಾಗ್ಯದ ಪ್ರಾರ್ಥನೆಯನ್ನೇನು ಹೇಳಿಲ್ಲವಾದರೂ, ಮನಸ್ಸಿನ ಬೇಡಿಕೆಯನ್ನು ಅಜ್ಜನ ಮಂದಿಟ್ಟಿದ್ದೇನೆ. ಅಜ್ಜ ಅನುಗ್ರಹ ಮಾಡಿದರೆ ಎಲ್ಲವೂ ಸುಸೂತ್ರವಾಗಿ ನೆರವೇರಲಿದೆ ಅನ್ನೋ ಭರವಸೆ ಇದೆ ಎಂದಿದ್ದಾರೆ ನಟಿ ಪ್ರೇಮಾ.
ನಟಿ ಪ್ರೇಮಾ ಅವರಿಗೆ ಈಗ 46 ವರ್ಷ ವಯಸ್ಸು. ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗವನ್ನು ರೂಲ್ ಮಾಡಿದ್ದ ನಟಿ. ರಾಜ್‍ಕುಮಾರ್ ಕ್ಯಾಂಪ್‍ನಿಂದಲೇ ಬಂದಿದ್ದ ಪ್ರೇಮಾ ಶಿವರಾಜ್ ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಮೇಶ್, ರವಿಚಂದ್ರನ್, ವೆಂಕಟೇಶ್, ಮೋಹನ್ ಲಾಲ್.. ಹೀಗೆ ದಕ್ಷಿಣ ಭಾರತದ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿದ್ದವರು.
2016ರಲ್ಲಿ ಜೀವನ್ ಅಪ್ಪಚ್ಚು ಎಂಬುವರ ಜೊತೆ ಮದುವೆಯಾಗಿದ್ದ ಪ್ರೇಮಾ ಅವರ ವೈವಾಹಿಕ ಜೀವನ ಸರಿಯಾಗಿರಲಿಲ್ಲ. ಆ ಮದುವೆಯ ಬಗ್ಗೆ ಯಾವ ಮಾತನ್ನೂ ಆಡದ ಪ್ರೇಮಾ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಕಂಕಣ ಭಾಗ್ಯದ ವರ ಕೇಳಿದ್ದಾರೆ. ಕೊರಗಜ್ಜ ಈಡೇರಿಸಿದರೆ ಪ್ರೇಮಾ ಬದುಕಿನಲ್ಲಿ ಮತ್ತೊಮ್ಮೆ ಪ್ರೀತಿಯ ಓಂಕಾರ ಮೊಳಗಲಿದೆ.