ನನಗೆ ಚಿತ್ರರಂಗದ ದಾರಿ ತೋರಿಸಿದ್ದು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ. ಅವರು ನನಗೆ ಅವಕಾಶ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನಾನು ಸಾಕಷ್ಟು ಒಳ್ಳೆಯ ಜನರ ಜೊತೆಗೆ ಕೆಲಸ ಮಾಡಿದ್ದೇನೆ. ಈ ಮಾತು ಹೇಳಿರುವುದು ರಶ್ಮಿಕಾ ಮಂದಣ್ಣ. ಇದು ಅಭಿಮಾನಿಗಳಲ್ಲಿ ಸಂಚಲನವನ್ನೇ ಸೃಷ್ಟಿಸಿದೆ.
ಪ್ರೇಮಾ ದಿ ಜರ್ನಲಿಸ್ಟ್ ಅನ್ನೋ ಯೂಟ್ಯೂಬ್ ಚಾನೆಲ್ಲಿನಲ್ಲಿ ಮಾತಾಡಿರುವ ರಶ್ಮಿಕಾ ಮಂದಣ್ಣ ಪುನೀತ್ ರಾಜಕುಮಾರ್ ಜೊತೆಗಿನ ನೆನಪುಗಳನ್ನೂ ಮೆಲುಕು ಹಾಕಿದ್ದಾರೆ. ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವುದು ಹೇಗೆ ಎಂದು ನನಗೆ ಗೊತ್ತಾಗಿದ್ದು ಪುನೀತ್ ಸರ್ ಜೊತೆ ಕೆಲಸ ಮಾಡಿದ ನಂತರ. ಅವರ ಕೆಲಸ ಮಾಡುವ ರೀತಿ ನನ್ನ ಮೇಲೆ ಬಹಳ ಪ್ರಭಾವ ಪ್ರಭಾವ ಬೀರಿತು ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಇತ್ತೀಚೆಗೆ ಹಿಂದಿ ಯೂಟ್ಯೂಬ್ ಚಾನೆಲ್ಲೊಂದಕ್ಕೆ ಮಾತನಾಡಿದ್ದ ರಶ್ಮಿಕಾ ಮಂದಣ್ಣ ರಕ್ಷಿತ್, ರಿಷಬ್ ಇಬ್ಬರ ಹೆಸರನ್ನೂ ಹೇಳದೆ, ಪರಂವಾ ಸ್ಟುಡಿಯೋಸ್ ಹೆಸರನ್ನೂ ಹೇಳದೆ.. ಮಾತನಾಡಿದ್ದರು. ನನಗೆ ನಟನೆಯಲ್ಲಿ ಆಸಕ್ತಿಯೇನೂ ಇರಲಿಲ್ಲ. ಅವರೇ ಬೆನ್ನು ಬಿದ್ದ ನಟಿಸುವಂತೆ ಮಾಡಿದ್ದರು ಎಂದಿದ್ದರು ರಶ್ಮಿಕಾ. ಇದು ಸಾಕಷ್ಟು ವಿವಾದ ಹುಟ್ಟು ಹಾಕಿತ್ತು.
ರಶ್ಮಿಕಾ ತೆಲುಗಿನಲ್ಲಿ ಸ್ಟಾರ್ ಆದ ಮೇಲೆ ಕನ್ನಡ ಮರೆತರು ಎಂಬ ವಿಷಯಕ್ಕೆ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ ಇತ್ತೀಚೆಗೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವುದಕ್ಕೆ ಮುಂದಾಗಿರೋ ರಶ್ಮಿಕಾ, ಸಂಕ್ರಾಂತಿ ಶುಭಾಶಯ ಹೇಳುವಾಗ ಕನ್ನಡದಲ್ಲಿಯೇ ಮೊದಲು ಟ್ವೀಟ್ ಮಾಡಿದ್ದರು. ರಶ್ಮಿಕಾ ಈಗ ರಕ್ಷಿತ್, ರಿಷಬ್ ಇಬ್ಬರ ಹೆಸರನ್ನೂ ಹೇಳಿರುವುದು ಮುಂದಿನ ಹಂತ. ರಶ್ಮಿಕಾ ಬದಲಾಗುತ್ತಿದ್ದಾರೆ.
ಸದ್ಯಕ್ಕೆ ರಶ್ಮಿಕಾ ಮಂದಣ್ಣ ಪುಷ್ಪ 2, ಹಿಂದಿಯಲ್ಲಿ ರಣ್‍ಬೀರ್ ಕಪೂರ್ ಜೊತೆ ಅನಿಮಲ್ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಯಲ್ಲೇ ಮಹಿಳಾ ಕೇಂದ್ರಿತ ಸಿನಿಮಾವೊಂದನ್ನೂ ಶೀಘ್ರದಲ್ಲೇ ಅನೌನ್ಸ್ ಮಾಡಲಿದ್ದೇನೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ.