ಪೆಂಟಗನ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಐವರು ನಿರ್ದೇಶಕರು ಮತ್ತು ಐದು ಕಥೆಗಳ ಲಿಸ್ಟಿನಲ್ಲಿದು ಮೊದಲ ಕಥೆ ಇದು. ಕನ್ನಡ ಹೋರಾಟಗಾರನೊಬ್ಬನ ರಕ್ತ ಚರಿತ್ರೆ. ಕಿಶೋರ್ ಕನ್ನಡ ಹೋರಾಟಗಾರನ ಪಾತ್ರದಲ್ಲಿ ನಟಿಸಿದ್ದಾರೆ. ಕಿಶೋರ್ ಪಾತ್ರ ಹೋರಾಟಗಾರನದ್ದಷ್ಟೇ ಅಲ್ಲ, ಭೂಗತದೊರೆಯೊಬ್ಬನ ಕಥೆಯೂ ಹೌದು. ಡಾನ್ ಒಬ್ಬ ಕನ್ನಡ ಹೋರಾಟಗಾರನ ವೇಷ ಧರಿಸಿ ಬದಲಾಗುವ ಕಥೆ. ಚಿತ್ರದ ಟೀಸರ್ ಕುತೂಹಲ ಹುಟ್ಟಿಸುತ್ತಿದೆ. ಗುರು ದೇಶಪಾಂಡೆ ಕೈಚಳಕ. ಕಿಶೋರ್, ಪ್ರಥ್ವಿ ಅಂಬರ್ ಪ್ರಧಾನ ಪಾತ್ರದಲ್ಲಿದ್ದಾರೆ. ರೂಪೇಶ್ ರಾಜಣ್ಣ, ಅಶ್ವಿನಿ ಗೌಡ, ಶರಣ್ಯ ಶೆಟ್ಟಿ, ವೈಭವ್ ನಾಗರಾಜ್ ಕೂಡಾ ನಟಿಸಿದ್ದಾರೆ.
ಆದರೆ ರೂಪೇಶ್ ರಾಜಣ್ಣ ಮತ್ತು ಅಶ್ವಿನಿ ಗೌಡ ಇಬ್ಬರೂ ಕಲಾವಿದರಷ್ಟೇ ಅಲ್ಲ, ಕನ್ನಡ ಹೋರಾಟಗಾರರೂ ಹೌದು. ಟೀಸರಿನಲ್ಲಿ ಒಂದು ಕಡೆ ಎಷ್ಟು ಬಂತು ರೋಲ್ ಕಾಲ ಅನ್ನೋ ಡೈಲಾಗ್ ಬರುತ್ತೆ. ಈ ಪದವೇ ಈಗ ವಿವಾದದ ಮೂಲ.
ಟೀಸರ್ ರಿಲೀಸ್ ವೇಳೆಯಲ್ಲೇ ರೂಪೇಶ್ ರಾಜಣ್ಣ ಗುರು ದೇಶಪಾಂಡೆ ಅವರನ್ನು ತರಾಟೆಗೆ ತೆಗೆದುಕೊಂಡರು. ರೂಲ್ ಕಾಲ್ ಪದಕ್ಕೆ ಸ್ಪಷ್ಟನೆ ಕೊಡಿ ಎಂದು ಹಠಕ್ಕೆ ಬಿದ್ದರು. ಸಿನಿಮಾದಲ್ಲಿ ಉತ್ತರ ಇದೆ. ಹೋರಾಟಗಾರರನ್ನು ಲೇವಡಿ ಮಾಡಿಲ್ಲ ಎಂದರು ಗುರು ದೇಶಪಾಂಡೆ.
ಕನ್ನಡದ ಕೆಲಸಕ್ಕಾಗಿ ಹೋರಾಡುವವರನ್ನು ರೋಲ್ ಕಾಲ್ ಎಂದು ಕರೆದಾಗ ಖಂಡಿತಾ ಸಿಟ್ಟು ಬರುತ್ತೆ. ನಮಗೆ ಯಾರೂ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿಲ್ಲ. ಬದಲಿಗೆ ಕೇಸು ಬಿದ್ದಿವೆ. ಈಗಲೂ ನನ್ನ ಮೇಲೆ ನಾಲ್ಕು ಕೋರ್ಟ್ ಕೇಸ್ ನಡೆಯುತ್ತಿದೆ. ಯಾರಾದರೂ ಕನ್ನಡ ಕಲಾವಿದರನ್ನು ಕಾರ್ಯಕ್ರಮಕ್ಕೆ ಕರೆದಾಗ ಎಷ್ಟು ಕೊಡ್ತೀರಾ ಎಂದು ಡೈರೆಕ್ಟ್ ಆಗಿ ಕೇಳ್ತಾರೆ. ಆದರೆ ನಾವು ನಮ್ಮ ಪೆಟ್ರೂಲ್ ಹಾಕಿಕೊಂಡು ಕನ್ನಡದ ಕೆಲಸಕ್ಕೆ ಹೋಗುತ್ತೇವೆ. ಹೀಗಾಗಿ ರೋಲ್ ಕಾಲ್ ಹೋರಾಟಗಾರರು ಅನ್ನೋ ಪದ ಕೇಳಿದಾಗ ನಿಜಕ್ಕೂ ನೋವಾಗುತ್ತೆ ಎಂದಿದ್ದಾರೆ ಅಶ್ವಿನಿ ಗೌಡ.
ನೀವೂ ಕೂಡಾ ನಟಿಸಿದ್ದೀರಲ್ವಾ ಎಂದಾಗ ಹೌದು, ನಟನೆಯೇ ಬೇರೆ. ನಮಗೆ ಕೊಟ್ಟ ಪಾತ್ರ ಮತ್ತು ಅದರ ಬಗ್ಗೆ ವಿವರ ತಿಳ್ಕೊಳ್ತೀವಿ. ಒಪ್ಕೊಂಡ್ವಾ.. ನಟಿಸಿದ್ವಾ.. ಬಂದ್ವಾ.. ಅಷ್ಟೆ. ಇಡೀ ಸಿನಿಮಾ ಏನಿರುತ್ತೆ ಅನ್ನೋದು ನಮಗೆ ಗೊತ್ತಿರಲ್ಲ ಎಂದಿದ್ದಾರೆ ಅಶ್ವಿನಿ ಗೌಡ.