ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದೇ ತಡ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮೋತ್ಸವಕ್ಕೆ ಸಿದ್ಧರಾಗತೊಡಗಿದ್ದಾರೆ. ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರಂತೂ ಸ್ಮಾರಕ ಉದ್ಘಾಟನೆಯನ್ನು ಸಂಭ್ರಮಿಸುತ್ತಿದ್ದಾರೆ.
ಸ್ಮಾರಕ ಉದ್ಘಾಟನೆ ನಮ್ಮ ಪಾಲಿಗೆ ಜಾತ್ರೆಯೇ. 13 ವರ್ಷಗಳಿಂದ ಕಾದಿದ್ದೇವೆ. ಆ ದಿನ ನೂರಾರು ಕಾರುಗಳ ಮೂಲಕ ಬೆಂಗಳೂರು ಟು ಮೈಸೂರು ಪಥಸಂಚಲನ ನಡೆಯಲಿದೆ. ಬೆಂಗಳೂರಿನಿಂದ ಮೈಸೂರುವರೆಗೆ ನೂರಾರು ಕಟೌಟ್ ರಾರಾಜಿಸಲಿವೆ. ಮೈಸೂರಿನಲ್ಲಿ ವಿಷ್ಣುಸೇನಾ ಸಮಿತಿ ವತಿಯಿಂದಲೇ ಕುಂಭಮೇಳ, ಜಾನಪದ ತಂಡಗಳಿಂದ ನೃತ್ಯ, ಕುಣಿತ, ದೀಪೋತ್ಸವ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ ವೀರಕಪುತ್ರ ಶ್ರೀನಿವಾಸ್.
ಜನವರಿ 29ರಂದು ರಾಜ್ಯ ಸರ್ಕಾರದಿಂದಲೇ ವಿಷ್ಣು ಸ್ಮಾರಕ ಉದ್ಘಾಟನೆಯಾಗಲಿದ್ದು, ಕಾರ್ಯಕ್ರಮವನ್ನು ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಭಾರತಿ ವಿಷ್ಣುವರ್ಧನ್, ಅನಿರುದ್ಧ ಸೇರಿದಂತೆ ವಿಷ್ಣು ಅವರ ಇಡೀ ಕುಟುಂಬ ಹಾಗೂ ಸಾವಿರಾರು ಅಭಿಮಾನಿಗಳು ಸ್ಮಾರಕ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ.