ನಟ ಶ್ರೀಮುರಳಿ ಮನೆಗೆ ವಾಪಸ್ ಆಗಿದ್ದಾರೆ. ಸುಮಾರು 2 ಗಂಟೆ ಆಪರೇಷನ್ ಬಳಿಕ ಶ್ರೀಮುರಳಿ ಆಸ್ಪತ್ರೆಯಲ್ಲಿ ತೀವ್ರ ನಿಗಾದಲ್ಲಿದ್ದರು. ಆಪರೇಷನ್ ಯಶಸ್ವಿಯಾಗಿದ್ದು ಮುರಳಿ ಮನೆಗೆ ಬಂದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಶ್ರೀಮುರಳಿ ಜೊತೆ ಸೆಲ್ಫಿ ತೆಗೆದುಕೊಂಡು ಮನೆಗೆ ಕಳಿಸಿಕೊಟ್ಟಿದ್ದೇ ವಿಶೇಷ.
ನಟ ಶ್ರೀಮುರಳಿ ಬಘೀರ ಚಿತ್ರದ ಚಿತ್ರೀಕರಣ ವೇಳೆ ಏಟು ಮಾಡಿಕೊಂಡಿದ್ದರು. ಡ್ಯೂಪ್ ಬಳಸದೆ ಮಾಡಿದ ಸ್ಟಂಟ್ ಎಡವಟ್ಟಾಗಿ ಗಂಭೀರವಾಗಿಯೇ ಪೆಟ್ಟು ಬಿದ್ದಿತ್ತು. ತಕ್ಷಣ ಶ್ರೀಮುರಳಿ ಅವರನ್ನು ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಶ್ರೀಮುರಳಿ ಅವರ ಮೊಣಕಾಲಿನಲ್ಲಿ ಫ್ರಾಕ್ಚರ್ ಆಗಿತ್ತು. ಈ ಹಿಂದೆ ಮದಗಜ ವೇಳೆಯಲ್ಲಿ ಕೂಡಾ ಗಾಯವಾಗಿದ್ದು ಅದೇ ಎಡಗಾಲಿಗೆ ಬಿದ್ದ ಪೆಟ್ಟು ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಹೀಗಾಗಿ ಆಪರೇಷನ್ ಅನಿವಾರ್ಯವಾಗಿತ್ತು.
ವೈದ್ಯರು ಶ್ರೀಮುರಳಿಗೆ 6 ವಾರಗಳ ರೆಸ್ಟ್ ಹೇಳಿದ್ದಾರೆ. 6 ವಾರ ಅಂದ್ರೆ ಒಂದೂವರೆ ತಿಂಗಳು ಕಂಪ್ಲೀಟ್ ಬೆಡ್ ರೆಸ್ಟ್‍ನಲ್ಲಿಯೇ ಇರಬೇಕು. ನಂತರದ ಒಂದೂವರೆ ತಿಂಗಳಲ್ಲಿ ಮೊಣಕಾಲಿನ ಮೇಲೆ ಪ್ರೆಷರ್ ಹಾಕದೆ ಓಡಾಡಬಹುದು. ಅದಾದ ಮೇಲೆ ನಾರ್ಮಲ್ ಸ್ಟೇಜ್‍ಗೆ ಬಂದಿದ್ದಾರೆಯೇ ಇಲ್ಲವೇ ಎಂಬುದನ್ನು ಮತ್ತೆ ಮತ್ತೆ ಪರೀಕ್ಷೆ ಮಾಡಿ ವೈದ್ಯರು ನಿರ್ಧರಿಸುತ್ತಾರೆ. ಅಂದ್ರೆ ಇನ್ನಾರು ತಿಂಗಳು ಶ್ರೀಮುರಳಿ ಫೈಟು, ಡಾನ್ಸು ಮಾಡುವಂತಿಲ್ಲ. ಅಲ್ಲಿಯವರೆಗೆ ಬಘೀರ ಚಿತ್ರದ ಚಿತ್ರೀಕರಣವೂ ನಡೆಯುವಂತಿಲ್ಲ. ಡಾ.ಸೂರಿ ನಿರ್ದೇಶನದ ಬಘೀರ ಚಿತ್ರದ ಕಡೆಯ ಹಂತದ ಚಿತ್ರೀಕರಣ ಕೊನೆಯ ಹಂತದಲ್ಲಿತ್ತು. ಕೆಲವೇ ಕೆಲವು ದೃಶ್ಯಗಳು ಬಾಕಿಯಿದ್ದವು. ಆದರೆ ದುರದೃಷ್ಟವಶಾತ್ ಈ ಅಪಘಾತ ನಡೆದು ಬಘೀರ ಚಿತ್ರಕ್ಕೂ ಬ್ರೇಕ್ ಬಿದ್ದಿದೆ. ಹೊಂಬಾಳೆ ಪ್ರೊಡಕ್ಷನ್ಸ್‍ನವರ ಬಘೀರ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆಯಿದೆ.