` ಮತ್ತೆ ಲವ್ ಬಡ್ರ್ಸ್ ಆದ ಲವ್ ಮಾಕ್ಟೇಲ್ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮತ್ತೆ ಲವ್ ಬಡ್ರ್ಸ್ ಆದ ಲವ್ ಮಾಕ್ಟೇಲ್ ಜೋಡಿ
Love Birds Movie Image

ಲವ್ ಮಾಕ್ಟೇಲ್ ಚಿತ್ರದ ಮೂಲಕ ತೆರೆಯ ಮೇಲೆ ಭರ್ಜರಿ ಜೋಡಿಯಾದವರು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ. ತೆರೆಯ ಮೇಲೆ ಹಾಗೂ ರಿಯಲ್ ಲೈಫಿನಲ್ಲಿ ಎರಡೂ ಕಡೆ ಮುದ್ದು ಮುದ್ದು ಜೋಡಿಯಾದ ಮಿಲನಾ ಮತ್ತು ಕೃಷ್ಣ ಈಗ ಮತ್ತೊಮ್ಮೆ ಒಂದಾಗಿದ್ದಾರೆ. ಲವ್ ಬಡ್ರ್ಸ್ ಆಗಿ.

ಲವ್ ಮಾಕ್ಟೇಲ್ ಮತ್ತು ಲವ್ ಮಾಕ್ಟೇಲ್ 2ನಲ್ಲಿ ಇಬ್ಬರೂ ಜೊತೆಯಾಗಿದ್ದರು. ಮೊದಲ ಚಿತ್ರ ಪ್ರೇಕ್ಷಕರ ಮನಸ್ಸನ್ನೂ, 2ನೇ ಚಿತ್ರ ಬಾಕ್ಸಾಫೀಸನ್ನೂ ಗೆದ್ದಿತ್ತು. ಜೊತೆಗೆ ಇವರಿಬ್ಬರೂ ನಟಿಸಿದ ಇನ್ನೊಂದು ಚಿತ್ರ ಮಿ.ಬ್ಯಾಚುಲರ್. ಲವ್ ಮಾಕ್ಟೇಲ್ ಚಿತ್ರಕ್ಕೆ ಹೋಲಿಸಿದರೆ ಬ್ಯಾಚುಲರ್ ದೊಡ್ಡ ಮಟ್ಟದ ಸದ್ದನ್ನೇನೂ ಮಾಡಲಿಲ್ಲ. ಈಗ ಈ ಇಬ್ಬರೂ ಒಂದಾಗಿದ್ದಾರೆ.

ಆದರೆ ಈ ಬಾರಿ ಇವರಿಬ್ಬರನ್ನೂ ಒಂದುಗೂಡಿಸಿರುವುದು ಪಿ.ಸಿ.ಶೇಖರ್. ಡಿಫರೆಂಟ್ ಕಥೆಗಳನ್ನು ಅಷ್ಟೇ ಡಿಫರೆಂಟ್ ಆಗಿ ಹೇಳುವ ಪಿ.ಸಿ.ಶೇಖರ್ ಈ ಇಬ್ಬರನ್ನೂ ಅಷ್ಟೇ ವಿಭಿನ್ನವಾಗಿ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರದ ಟೀಸರ್ ಅದೇ ಕಾರಣಕ್ಕೆ ಇಷ್ಟವಾಗುತ್ತಿದೆ. ಕಡ್ಡಿಪುಡಿ ಚಂದ್ರು ನಿರ್ಮಾಣದ ಲವ್ ಬಡ್ರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ವಿಜಯ್ ರಾಘವೇಂದ್ರ ಮತ್ತು ಅಜೇಯ್ ರಾವ್.

ಲವ್ ಬಡ್ರ್ಸ್ ಚಿತ್ರದಲ್ಲಿ ಕೃಷ್ಣ ದೀಪಕ್ ಆಗಿ, ಮಿಲನಾ ಪೂಜಾ ಆಗಿ ನಟಿಸುತ್ತಿದ್ದಾರೆ. ಇಬ್ಬರಿಗೂ ಕಥೆ ಸಖತ್ ಇಷ್ಟವಾಗಿದೆ. ಇದು ಕೇವಲ ಲವ್ ಸ್ಟೋರಿ ಅಲ್ಲ ಅನ್ನೋದು ಕೃಷ್ಣ ಮತ್ತು ಮಿಲನಾ ಅವರ ಮಾತಷ್ಟೇ ಅಲ್ಲ, ನಿರ್ದೇಶಕರದ್ದೂ ಅದೇ ಕಥೆ. ನನಗೆ ಒಂದೇ ಜಾನರ್ ಸಿನಿಮಾ ಮಾಡೋಕೆ ಬರಲ್ಲ. ಹೀಗಾಗಿ ಲವ್ ಬಡ್ರ್ಸ್ ಕಥೆ ಸಿದ್ಧ ಮಾಡಿದೆ. ಇಲ್ಲಿ ಪ್ರೀತಿಯ ಜೊತೆಗೆ ಬೇರೆ ಬೇರೆ ವಿಷಯಗಳೂ ಇವೆ ಎನ್ನುತ್ತಾರೆ ಶೇಖರ್.

ಕೃಷ್ಣ ಸಖತ್ ಸ್ಟೈಲಿಷ್ ಆಗಿ ಕಾಣಿಸುತ್ತಿದ್ದರೆ, ಮಿಲನಾ ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಟಲೆಕ್ಚುವಲ್ ಆಗಿ ಕಾಣಿಸುತ್ತಿದ್ದಾರೆ. ಆತ ಸಾಫ್ಟ್‍ವೇರ್ ಮತ್ತು ಟ್ರಾವೆಲ್‍ನಲ್ಲಿ ಖುಷಿ ಕಾಣುವ ಹುಡುಗ. ಈಕೆ ಸ್ವತಂತ್ರ ಮನೋಭಾವದ ಹೋರಾಟದ ಹುಡುಗಿ. ಇವರಿಬ್ಬರೂ ಹೇಗೆ ಪ್ರಣಯದ ಪಕ್ಷಿಗಳಾಗ್ತಾರೆ..? ಒಮ್ಮೆ ಟೀಸರ್ ನೋಡಿಬಿಡಿ..