ಆರ್.ಆರ್.ಆರ್. ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ನಂತರ ಆಸ್ಕರ್ ರೇಸಿನಲ್ಲೂ ಭರವಸೆ ಹುಟ್ಟಿಸಿದೆ ರಾಜಮೌಳಿ-ರಾಮ್ ಚರಣ್-ಎನ್.ಟಿ.ಆರ್. ಅವರ ಆರ್.ಆರ್.ಆರ್. ಇಷ್ಟೇ ಅಲ್ಲ, ಇಡೀ ವರ್ಷ ಸದ್ದು ಮಾಡಿದ ಚಿತ್ರಗಳಾದ ಕೆಜಿಎಫ್, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ, ಪುಷ್ಪ, ಕಾರ್ತಿಕೇಯ 2, ವಿಕ್ರಂ. ಪೊನ್ನಿಯನ್ ಸೆಲ್ವನ್.. ಅಷ್ಟೆಲ್ಲ ಯಾಕೆ ಇದೇ ಬಾಲಿವುಡ್ಡಿನ ಕಾಶ್ಮೀರ್ ಫೈಲ್ಸ್ ಕೂಡಾ ಬಾಲಿವುಡ್ ಮಂದಿಯ ರೆಗ್ಯುಲರ್ ಶೈಲಿಯ ಸಿನಿಮಾ ಅಲ್ಲ. ಅದು ಬೇರೇನೇ. ಈಗ ಆ ಎಲ್ಲ ಚಿತ್ರಗಳೂ ಆಸ್ಕರ್ ರೇಸಿನಲ್ಲಿವೆ. ಅದರ ಜೊತೆಗೆ ಬಾಲಿವುಡ್ ಮಂದಿ ಕೆಲವರ ಮೇಲೆ ಮುಗಿಬೀಳುತ್ತಿರುವುದೂ ಇದೆ.
ಬಾಲಿವುಡ್ ಮಂದಿ ಈಗ ತಮ್ಮ ಸಿನಿಮಾ ಪ್ರಚಾರಕ್ಕೆ ದಕ್ಷಿಣ ಭಾರತದ ಚಿತ್ರಗಳ ಹೀರೋಗಳನ್ನೂ ಬಳಸಿಕೊಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡು, ಮಾಲಿವುಡ್.. ಎಂದೆಲ್ಲ ಏನಿಲ್ಲ. ಇಂಡಿಯನ್ ಸಿನಿಮಾ ಎನ್ನುತ್ತಿದ್ದಾರೆ. ಮೊದಲೆಲ್ಲ ಹೀಗಿರಲಿಲ್ಲ ಎನ್ನವುದೂ ವಾಸ್ತವ. ಯೇ ಸಪರೇಟ್.. ವೋ ಸಪರೇಟ್ ಎನ್ನುತ್ತಿದ್ದ ಬಾಲಿವುಡ್ ಮಂದಿ ಸತತ ಸೋಲಿನ ಬಳಿಕ ಬದಲಾಗಿದ್ದಾರೆ. ಆದರೆ ಬಾಲಿವುಡ್ ಎಂಬ ಅಹಂ ಕಡಿಮೆಯಾದಂತಿಲ್ಲ.
ಇತ್ತೀಚೆಗೆ ಆಂಧ್ರಪ್ರೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಆರ್.ಆರ್.ಆರ್.ತಂಡಕ್ಕೆ ತೆಲುಗು ಬಾವುಟವನ್ನು ಎತ್ತಿ ಹಿಡಿದಿದ್ದೀರಿ ಎಂದು ಅಭಿನಂದಿಸಿದ್ದಕ್ಕೆ, ಅದ್ನಾನ್ ಸಾಮಿಯಂತಹವರು ತೆಲುಗು ಅಲ್ಲ, ಇಂಡಿಯನ್ ಸಿನಿಮಾ ಎಂದು ಹೇಳಿ ಎಂದು ತಾಕೀತು ಮಾಡಿದ್ದರು. ಅದ್ನಾನ್ ಸಾಮಿಯ ಚಳಿ ಬಿಡಿಸಿದ್ದು ಕನ್ನಡತಿ ರಮ್ಯಾ.
ಈಗ ಅದೇ ರಾಜಮೌಳಿ ಅಮೆರಿಕದ ಪ್ರೆಸ್ ಮೀಟಿನಲ್ಲಿ ಇದು ಬಾಲಿವುಡ್ ಸಿನಿಮಾನಾ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ ಇದು ಬಾಲಿವುಡ್ ಸಿನಿಮಾ ಅಲ್ಲ. ಇದು ದಕ್ಷಿಣ ಭಾರತದ ತೆಲುಗು ಸಿನಿಮಾ ಎಂದಿದ್ದಾರೆ. ಇದು ಒಂದಷ್ಟ ಬಾಲಿವುಡ್ ಮಂದಿಯ ಹೊಟ್ಟೆಗೆ ಬೆಂಕಿ ಹಾಕಿದ್ದು, ಉರಿ ಕಾಣಿಸೋಕೆ ಶುರುವಾಗಿದೆ.
ಹಾಗೆಂದು ರಾಜಮೌಳಿ ಇದನ್ನೆಲ್ಲ ಯಾವುದೇ ಸೇಡಿನಿಂದ ಹೇಳಿದ್ದೂ ಅಲ್ಲ. ಕೆಲವು ವರ್ಷಗಳ ಹಿಂದೆ ಪ್ರಭಾಸ್ ಎದುರು ಹೃತಿಕ್ ರೋಷನ್ ಏನೇನೂ ಅಲ್ಲ ಎಂದು ನೀಡಿದ್ದ ಹೇಳಿಕೆಗೆ ಮುಲಾಜಿಲ್ಲದೆ ಸಾರಿ ಎಂದಿದ್ದಾರೆ. ನಾನು ಅಂದು ಬಳಸಿದ್ದ ಆ ಪದ ಸರಿಯಾಗಿರಲಿಲ್ಲ ಎಂದಿದ್ದಾರೆ.
ಅಂದಹಾಗೆ ಜನವರಿ 17ಕ್ಕೆ ಆಸ್ಕರ್ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣವಾಗಲಿದೆ.