ಜಯಸುಧಾ. ತೆಲುಗು, ತಮಿಳಿನಲ್ಲಿ ದೊಡ್ಡ ಹೆಸರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಜಯಸುಧಾ ಕನ್ನಡದಲ್ಲಿ ನೀ ತಂದ ಕಾಣಿಕೆ ಚಿತ್ರದಲ್ಲಿ ವಿಷ್ಣುವರ್ಧನ್ ಎದುರು ನಾಯಕಿಯಾಗಿ ನಟಿಸಿ ಗೆದ್ದಿದ್ದರು. ಶಿವರಾಜ್ ಕುಮಾರ್ ತಾಯಿಯಾಗಿ ವಜ್ರಕಾಯ ಮತ್ತು ತಾಯಿಯ ಮಡಿಲು ಚಿತ್ರದಲ್ಲಿ ನಟಿಸಿರುವ ಜಯಸುಧಾ ಅವರಿಗೆ ಇತ್ತೀಚೆಗೆ ಮತ್ತೊಮ್ಮೆ ಮದುವೆ ಎಂಬ ಕಾರಣಕ್ಕೆ ಸುದ್ದಿಯಾಗಿದ್ದರು. ಜಯಸುಧಾ ಅವರಿಗೆ 64 ವರ್ಷ. ಈಗಾಗಲೇ ಎರಡು ಮದುವೆಯಾಗಿದೆ. ಮೊದಲ ಪತಿಯಿಂದ ದೂರವಾದ ಬಳಿಕ 2ನೇ ಮದುವೆಯಾಗಿದ್ದರು. 2ನೇ ಪತಿ 2017ರಲ್ಲಿ ನಿಧನರಾಗಿದ್ದಾರೆ. ಇದೇ ವೇಳೆ ವಿದೇಶಿ ವ್ಯಕ್ತಿಯೊಬ್ಬರು, ಜಯಸುಧಾ ಅವರಿದ್ದ ಕಾರ್ಯಕ್ರಮಗಳಲ್ಲಿ ಪದೇ ಪದೇ ಕಾಣಿಸಿಕೊಂಡು ಸುದ್ದಿಯಾಗಿತ್ತು. ಜಯಸುಧಾ ಅವರು 3ನೇ ಮದುವೆಗೆ ರೆಡಿಯಾಗಿದ್ದಾರೆ ಎಂದು ಹೇಳೋಕೆ ಅಷ್ಟು ಸಾಕಾಗಿತ್ತು. ಇದೀಗ ಸ್ವತಃ ಜಯಸುಧಾ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇತ್ತೀಚೆಗೆ ಕೆಲವು ಮೀಡಿಯಾಗಳಲ್ಲಿ ನನಗೆ 3ನೇ ಮದುವೆ ಎಂಬ ಸುದ್ದಿ ನೋಡಿದೆ. ಅದು ಸುಳ್ಳು. ನನ್ನ ಜೊತೆ ಬರುತ್ತಿರುವ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ವ್ಯಕ್ತಿಯ ಹೆಸರು ಫಿಲಿಪ್ ರೂಲ್ಸ್. ಅಮೆರಿಕದವರು. ಅವರು ನನ್ನ ಬಯೋಪಿಕ್ ಮಾಡುತ್ತಿದ್ದಾರೆ. ನನ್ನ ಬಗ್ಗೆ ಎಲ್ಲ ಮಾಹಿತಿ ತಿಳಿದುಕೊಂಡಿದ್ದಾರೆ. ನಟಿಯಾಗಿರುವ ನಾನು ರಿಯಲ್ ಲೈಫಿನಲ್ಲಿ ಹೇಗಿರುತ್ತೇನೆ ಎಂದು ತಿಳಿದುಕೊಳ್ಳೋಕೆ ನನ್ನ ಜೊತೆ ಬರುತ್ತಿದ್ದಾರೆ, ಅಷ್ಟೆ ಎಂದಿದ್ದಾರೆ.