ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ. ಒಂದು ಸಿನಿಮಾ ಮೂಲಕ ಕಾಶ್ಮೀರಿ ಪಂಡಿತರು ಅನುಭವಿಸಿದ್ದ, ಸ್ವಂತ ದೇಶದಲ್ಲೇ ಯಾರೊಬ್ಬರೂ ಕಿವಿಗೊಡದ, ಕಣ್ಬಿಟ್ಟು ನೋಡದ ಸತ್ಯವನ್ನು ಜಗತ್ತಿನ ಎದುರು ತೆರೆದಿಟ್ಟವರು ವಿವೇಕ್ ಅಗ್ನಿಹೋತ್ರಿ. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ಹೇಳಿಕೊಂಡಿದ್ದ ಹಲವರಿಗೆ ಇರಿಸು ಮುರಿಸಾಯಿತಾದರೂ ವಿವೇಕ್ ಅಗ್ನಿಹೋತ್ರಿ ಗೆದ್ದಿದ್ದರು. ಅವರೀಗ ವ್ಯಾಕ್ಸಿನ್ ವಾರ್ ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಆಯ್ಕೆಯಾಗಿರೋದು ಸಪ್ತಮಿ ಗೌಡ.
ಕಾಂತಾರದ ಲೀಲಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ಸಪ್ತಮಿ ಗೌಡ, ಈಗಾಗಲೇ ಕಾಳಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಅಂಬರೀಷ್-ಕೃಷ್ಣ ಕಾಂಬಿನೇಷನ್ ಸಿನಿಮಾ ಅದು. ಇದರ ಜೊತೆಯಲ್ಲೇ ಒಪ್ಪಿಕೊಂಡಿರುವ ಸಿನಿಮಾ ವ್ಯಾಕ್ಸಿನ್ ವಾರ್. ಕಾಂತಾರ ಮೂಲಕ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಿತವಾಗಿರುವ ಸಪ್ತಮಿ ಗೌಡ, ವಿವೇಕ್ ಅಗ್ನಿಹೋತ್ರಿಯವರ ಮೊದಲ ಚಾಯ್ಸ್ ಎನ್ನುವುದು ವಿಶೇಷ.
ಹಿಂದಿ, ಕನ್ನಡ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ. ಹಾಗಾಗಿಯೇ ಚಿತ್ರಕ್ಕೆ ಬೇರೆ ಬೇರೆ ಭಾಷೆಯ ಕಲಾವಿದರನ್ನೂ ಆಯ್ಕೆ ಮಾಡಿದ್ದೇವೆ. ವ್ಯಾಕ್ಸಿನ್ ಕಂಡು ಹಿಡಿದದ್ದು ಭಾರತೀಯರು ಭಾರತದ ಬಗ್ಗೆ ಹೆಮ್ಮೆ ಪಡುವ ಸಾಧನೆ. ವಿಶ್ವದಲ್ಲೇ ಅತ್ಯಂತ ಅಗ್ಗದ ಹಾಗೂ ಸುರಕ್ಷಿತವಾದ ಲಸಿಕೆ ಕಂಡು ಹಿಡಿದ ಸಾಧನೆ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.
ಚಿತ್ರದಲ್ಲಿ ನನ್ನದು ನಾಯಕಿಯ ಪಾತ್ರ ಹಾಗೆ ಹೀಗೆ ಅಂದೆಲ್ಲ ಇಲ್ಲ. ಚಿತ್ರದಲ್ಲಿ ಕಥೆಯೇ ಹೀರೋ. ಹೀರೋಯಿನ್ ಎಲ್ಲ. ನನ್ನದು ಪ್ರಮುಖ ಪಾತ್ರ ಎಂದಷ್ಟೇ ಹೇಳಬಲ್ಲೆ ಎಂದಿದ್ದಾರೆ ಸಪ್ತಮಿಗೌಡ.
ಈ ಚಿತ್ರಕ್ಕೆ ಪಲ್ಲವಿ ಜೋಶಿ ನಿರ್ಮಾಪಕಿಯಾಗಿದ್ದಾರೆ. ಅನುಪಮ್ ಖೇರ್, ನಾನಾ ಪಾಟೇಕರ್, ದಿವ್ಯಾ ಸೇಠ್ ಕೂಡಾ ನಟಿಸುತ್ತಿದ್ದಾರೆ. ಪ್ರಿಪ್ರೊಡಕ್ಷನ್ ಕೆಲಸಗಳೆಲ್ಲ ಬಹುತೇಕ ಮುಗಿದಿದ್ದು ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ ವಿವೇಕ್ ಅಗ್ನಿಹೋತ್ರಿ.